Monday, December 24, 2007

ಮನಸಿನ್ನೂ ಹಸಿ ಗೋಡೆ....

ಅರ್ಥವಾಗದು ನನಗೆ
ಒಗಟಿನ ಮಾತು
ನಿಮ್ಮ ಪ್ರಬುದ್ಧ ನಡೆ-ನುಡಿ
ವ್ಯರ್ಥ ಜೀವಿ ನಾ
ಕಾರಣ......
ಮನಸಿದು ಹಸಿಗೋಡೆ...!




ಒಲಿಯದು ನನಗೆ
ಸಂಸ್ಕಾರ ಪಾಠ
ನಿಮ್ಮ ಜಗದ ನೀತಿ-ನಿಯಮ
ನನ್ನ ಪುಟ್ಟ ಜಗತ್ತೇ ಬೇರೆ
ಕಾರಣ.....
ಮನಸಿದು ಹಸಿಗೋಡೆ...!



ಶಕುತಿ ಇಲ್ಲ ನನಗೆ
ತಾಳಲು ಕಟು ಮಾತು
ನಿಮ್ಮ ಹಾಗಿನ ಧೈರ್ಯ
ಹಾಲಿನಂಥ ಮನಸು ಒಡೆದು ಹೋದೀತು
ಕಾರಣ.....
ಮನಸಿದು ಹಸಿಗೋಡೆ...!




ಮುಕುತಿ ಬೇಡ ನನಗೆ
ಸ್ವರ್ಗದ ಬಾಗಿಲಿಗೆ
ಅಲ್ಲ ನಾ ನಿಮ್ಮಂಥ ಆಸ್ತಿಕ
ಭಕುತಿಯೇ ಇಲ್ಲ ನನ್ನ ಪಾಲಿಗೆ
ಕಾರಣ....
ಮನಸಿದು ಹಸಿಗೋಡೆ...!




ನಿಮ್ಮಂತೆ ನಾನಲ್ಲ
ನನ್ನಂತೆ ನೀವಿಲ್ಲ
ಬದುಕಲಾರೆ ನಿಮ್ಮ ಹಾಗೆ ನಾ
ಕ್ರೂರ ಮನಗಳ ನಡುವೆ ಇರೆ ನಾ
ಕಾರಣ...
ಮನಸಿನ್ನೂ ಹಸಿಗೋಡೆ....!!

Monday, December 17, 2007

ಸತ್ಯ

ಮೌನ ರಾಗದಲ್ಲಿ
ನಿಶಬ್ದ ಗಾನ
ಇದ್ದರೂ ಕೇಳದು
ತೆರೆಯಬೇಕಿದೆ ಮನದ ಕಿವಿ
ಹಳೆಯ ಶಬ್ದಗಳಲ್ಲಿ
ಅದ್ಭುತ ಕವನ!
ಸಾಧ್ಯವಾಗದು ಯಾರಿಗೂ
ಜನ್ಮ ತಾಳಬೇಕಿದೆ ಶ್ರೇಷ್ಠ ಕವಿ!



ಹರಿದ ತಂತಿಯ ವೀಣೆಗೆ
ವೈಣಿಕನ ಹಂಗಿಲ್ಲ
ಸಿಗದು ನಾದ
ಚದುರಿಹೋದ ಅರ್ಥಗಳ ಕವನಕೆ
ಓದುಗನ ಹಂಗಿಲ್ಲ
ಅದು ಬರಿ ಮೊಂಡುವಾದ

Wednesday, November 07, 2007

Wish

ಹೊಸ ಬಾಳಿನ ಹೊಸ ಹೆಜ್ಜೆಗಳು
ಅಚ್ಚಳಿಯದ ಗುರುತಾಗಲಿ
ದೂರ ತೀರದ ಯಾನ
ಸಿಹಿಯಾದ ನೆನಪಾಗಲಿ


ಮನಸಿನ ಬಳ್ಳಿ ಬೆಳೆಯಲಿ ಹಬ್ಬಿ
ನಂಬಿಕೆಯ ಮರವ ತಬ್ಬಿ
ಮರದ ನಡುವೆ ಮೂಡಲಿ
ಕನಸಿನ ಕೋಗಿಲೆಯ ಇಂಚರ
ಅದು ಹಾಡಾಗಿ ಉಳಿಯಲಿ ಅಮರ

Thursday, October 25, 2007

ಮುಡಿಪು

ಮುಡಿಪಿರಲಿ ನಿನಗೆ
ಸುಡದೇ ಸಾಗುವ
ತಂಪಾದ ಬೇಸಿಗೆ
ಸೊಂಪಾದ ತಂಗಾಳಿಯ ಜೊತೆಗೆ
ಆಗಲಿ ಮನಗಳ ಬೆಸುಗೆ


ನೀನಿರುವಲ್ಲಿ ಇರಲಿ
ಶಾಂತ ಚಿತ್ತದ
ನಿರುಪದ್ರವಿ ಮಳೆಗಾಲದ ಸಿಂಚನ
ಅಲ್ಲಿಯೇ ಹುಟ್ಟಲಿ
ಕೊನೆಯಿಲ್ಲದ ಹೊಸಜೀವನ


ನಿನಗಷ್ಟೇ ಮೂಡಲಿ
ಕೊರೆಯದೇ ಕಾಪಾಡುವ
ನೂತನ ಚಳಿಗಾಲ
ಅಲ್ಲಿ ಬೆಚ್ಚಗೆ ಅರಳಲಿ
ನೆನಪಿನ ಚೈತ್ರ ಕಾಲ


ನೀ ಸಾಗುವ ದಾರಿಯಲಿ
ತೋರದಿರಲಿ ಸೃಷ್ಟಿ ಮುನಿಸು
ತೋರಲಿ ಕರುಣೆ ಈಡೇರಲು
ನಿನ್ನಲ್ಲಿ ನಾನಾಗುವ ಕನಸು




Monday, September 10, 2007

HB

ಎಂದಿಗೂ ಇರಿ
ಚೈತನ್ಯದ ಚಿಲುಮೆಯಾಗಿ
ಮೌನದಾಚೆಯ ಹೊಸ ಮಾತಾಗಿ
ಭಾವ ಬಿಂದುವಿನ ಅರ್ಥವಾಗಿ

ಬದುಕು ಹಸಿರಾಗಲಿ
ಸ್ನೇಹ ಬನದ ಬಯಲಲಿ
ಹೊಸ ಮನ್ವಂತರದ ಹೆಸರಲಿ
ಭವ್ಯ ಭವಿಷ್ಯದ ಉಸಿರಲಿ

ಕೂಡಿಟ್ಟ ಕನಸುಗಳು ನನಸಾಗಲಿ
ಬಾಳಿನ ಪಯಣದಲಿ
ಪಯಣದ ಪ್ರತಿ ಘಳಿಗೆ ಸಿಹಿಯಾಗಿರಲಿ
ಸಿಹಿ ಭರಿತ ಚೈತ್ರಗಳು ನಿಮ್ಮದಾಗಲಿ

Tuesday, September 04, 2007

ದ್ವಂದ್ವ

ಅದ್ಭುತವಲ್ಲ ಕಾಲತ್ಮಕತೆಯೂ ಅಲ್ಲ
ಏನೋ ಎಳೆ ಅದು
ಸಿಕ್ಕಂತೆ ಗೀಚಿದ್ಡಾಯಿತು
ಅರ್ಥವಿಲ್ಲದ ಗೆರೆಗಳಿಗೆ
ಜನರಿಟ್ಟ ಹೆಸರು ಮಹಾ ಕಲಾಕೃತಿ!


ಸತ್ವವಿಲ್ಲದ ತತ್ವಗಳು ಇಲ್ಲಿವೆ
ನನಗೇ ಅರ್ಥವಾಗದ
ಪದಗಳ ಲಾಸ್ಯವೂ ತುಂಬಿವೆ
ನಾ ಕಂಡ ಅತಿ ಸಾಮಾನ್ಯ
ಜೀವನ ಗಾಥೆಯ ಪದ ಜೋಡಣೆ
ಓದಿದವರಿಗೆ ಅನಿಸಿತಂತೆ ಅಭೂತಪೂರ್ವ ಕವನ!

ವಿಪ್ಲವ ಭಾವ

ರುಚಿಸುತಿಲ್ಲ
ನೀಲಾಕಾಶದ ದೈತ್ಯತೆ
ಹಕ್ಕಿಗಳ ನಿನಾದ
ಎಳೆ ಬಿಸಿಲ ಚೆಲ್ಲಾ ಟ
ಹೊಂಬಿಸಿಲ ಸ್ಪರ್ಶಕೆ
ನರ್ತಿಸುವಂತಿರುವ
ಹರಿವ ನೀರ ಕಲರವ

ಸ್ತಬ್ದ ಮೌನವಿದೆ
ನೀ ಮೃದು ಹೆಜ್ಜೆಗುರುತು
ಇಟ್ಟು ಹೋದ ಮನಸಿನಲಿ
ನೆನಪಧಾರೆ ಚೆಲ್ಲಿ
ಹೋದ ಮನೆಯಲಿ
ಬೆಂಬಿಡದೇ ನಿನ್ನಗಲಿಕೆಯ
ನೋವುಂಡು ಬೇಯುತಿರುವ ಬಾಳಲ್ಲಿ

ಒಡಲಾಳದಲ್ಲಿ
ಇನ್ನೂ ಉರಿಯುತಿದೆ
ಮತ್ತೆ ನಿನ್ನ ಬರುವಿಕೆಯ ಸಾರುವ
ದಿವ್ಯ ಪ್ರಣತಿ
ಬಿರುಗಾಳಿಗೂ ನಂದದೆ
ನಕ್ಕು ಹೇಳುವಂತಿದೆ
ಆಶಾಕಿರಣ ವಿರಲು ಇರು ಎದೆಗುಂದದೆ

ಹೇಳಿ ಕಳಿಸಿರುವೆ
ನೀಲಾಕಾಶದಲ್ಲಿ ಜೂಟಾಟವಾಡುವ
ಮುಗ್ಧ ಮೇಘ ಗಳಿಗೆ
ಈಗ ತಾನೇ ಉದಯಿಸಿ
ಎಳೆ ಬಿಸಿಲ ಸೂಸುತಿರುವ ರವಿಗೆ
ಪರಿಧಿ ಇಲ್ಲದೇ ಸಾಗುವ ಹಕ್ಕಿಗಳಿಗೆ
ತಡೆ ಇಲ್ಲದೇ ಹರಿವ ನೀರಿಗೆ
ನಿನ್ನ ಹುಡುಕಲು
ಬಸಿದಿಟ್ಟ ಭಾವನೆಗಳ ತಿಳಿಸಿ
ಮತ್ತೆ ನನ್ನೆಡೆಗೆ ಬರ ಹೇಳಲು

ಆದರೂ ಯಾಕೋ ದುಗುಡವಿದೆ
ಮೇಘಗಳು ಹಾದಿ ತಪ್ಪುವ ಅಪಾಯ
ಹಕ್ಕಿಗಳು ನನ್ನ ಮಾತ ಉಪೇಕ್ಷಿಸುವ ಸಂಶಯ
ರವಿಗೆ ಪುರುಸೊತ್ತಿಲ್ಲವೇನೋ...!
ಹರಿವ ನೀರು ನಿನ್ನ ಅರಸುವಲ್ಲಿ
ಸೋಲ ಬಹುದೇನೋ...!

ಮಂಗಳ ಹಾಡಿ
ಹುಚ್ಚು ಕುದುರೆಯಂತೆ ಓಡುವ
ಈ ಕೆಟ್ಟ ಆಲೋಚನೆಗಳಿಗೆ
ನನ್ನ ಈ ಸ್ನೇಹಿತರ ಜೊತೆಗೂಡಿ
ಬದುಕನ್ನು ಹಸನು ಗೊಳಿಸು ಬಾ ಗೆಳತಿ

Thursday, August 16, 2007

ಮಧುರ

ಮನಸೆಂಬ ಮಾಮರದಲ್ಲಿ
ಒಲವೆಂಬ ಕೋಗಿಲೆಯ ಇಂಚರ
ಮೂಡುವಂತೆ ನಿಮ್ಮ ಬದುಕಾಗಲಿ ಮಧುರ

ಸ್ನೇಹ ಸಾಗರದಲ್ಲಿ
ನೆನಪಿನ ದೋಣಿಯ ಪಯಣ ಅಮರ
ಪಯಣದ ಕ್ಷಣಗಳು ಆಗಿರಲಿ ಮಧುರ





Tuesday, July 24, 2007

ಹನಿಗಳು


ಮಾತಾಡದೆ ಮೌನ ಮುದ್ರೆ ಹೊತ್ತು,
ಪಲ್ಲವಿ ಇಲ್ಲದ ನಿರ್ಜೀವ ಕವನ ದಲ್ಲಿ
ಅತೀರೇಕ ಎನಿಸುವ ಭಾವುಕತೆ ಹರಿವಂತೆ
ಹತ್ತಿರ ವಿದ್ದರೂ ಮಾತಡದ ಗೆಳತಿ ಒಂದು ಒಗ ಟು
ಅವಳು ಬಿಡಿಸಲಾಗದ ಕಗ್ಗಂಟು

******
ಶೂನ್ಯ ದಲ್ಲಿ ಬೆರೆಯುವ ಭಾವ
ಅನಂತತೆಯಲಿ ನಿರಂತರತೆಯ
ಹುಡುಕುವ ಹುಚ್ಚು ಮನಸು
ತಾರೆಯ ಅಂಚಿನಲ್ಲಿ ಪುಟ್ಟ ಗೂಡು
ಕಟ್ಟುವ ಅಸಾಧ್ಯ ಕಲ್ಪನೆ....!
ಕೊನೆಯಿಲ್ಲ ಗೆಳತಿ ನನ್ನ ಬೆಪ್ಪು ಭ್ರಮೆ ಗಳಿಗೆ....!!

***
ನೂರೊಂದು ಭಾವನೆಗಳು
ಮಿಳಿತಗೊಂಡು ಹತ್ತಾರು
ಕವನ ಗಳಾದವು
ಸಮಯವಿಲ್ಲದೇ ಯಾರಿಗೂ ಓದಲು
ಅನಿವಾರ್ಯವಾಗಿ ಮನಸ್ಸಿನ ಆ ಭಾವನೆಗಳ
ಗೊಂಚಲು ಮಣ್ಣು ಪಾಲಾದವು..!

****

ಬೀಜ ಗಿಡ ವಾಯಿತು
ಸೊಂಪಾಗಿ ಬೆಳೆಯಿತು
ನಸು ನಗುವ ಗುಲಾಬಿಯೂಂದು ಅರಳಿಬಿಟ್ಟಿತು
ತಾಯಿ ಬೇರು ತನ್ನ ಮಗುವನ್ನು ರಕ್ಷಿಸಲು
ಮುಳ್ಳುಗಳಿಗೆ ಹೇಳಿ
ಭೂಮಿಯಲ್ಲಿ ಹೂತು ಹೋದಳು
ಓದುವ ನದಿಯನ್ನೇ ತಡೆ ವವನಿಗೆ
ಮುಳ್ಳುಗಳು ಭಯ ಎಲ್ಲಿದೆ...?
ಸುಂದರ ಗುಲಾಬಿ ಕಿತ್ತುಕೊಂಡು ಹೋದ ಮಾನವ
ತಾಯಿ ಬೇರು ಅತ್ತಳೋ ಬಿಟ್ಟಳೋ ತಿಳಿಯದಾಗಿದೆ..!

Saturday, July 21, 2007

ಸರಿಯ ಬೇಡ ದೂರ

ಮಿಂಚಿ ಮರೆಯಾಗ ಬೇಡ
ಸಂಚು ಹೂಡಿ ಅವಿತುಕೊಳ್ಳಬೇಡ
ಮರೆಯಲ್ಲಿ ನಿಂತು ನನ್ನ ಅಣಕಿಸಬೇಡ
ಮುದ್ಡಾದ ಮುಖವ ನೀ ನನ್ನಿಂದ
ಮರೆಮಾಡಿ ಈ ಮನ ಹಿಂಡಬೇಡ

ಸರಿದು ಹೋದ ಜೀವನ ಚೈತ್ರ ಗಳಲ್ಲಿ
ಹರಿದು ಹೋದ ಮನದ ಭಾವನೆಗಳಲಿ
ಬಸಿದು ಹರಡಿದ ವಿಶೇಷ ಪದಗಳಲ್ಲಿ
ನಿನ್ನ ಕಾಣುವ ಇರಾದೆ ಇದೆ ನನ್ನಲ್ಲಿ

ಕರಗಿ ಬೀಳುವ ಮೇಣದ ಶೇಷ ನಾ
ಸೊರಗಿ ಬಾಡುವ ಬೇಡದ ಬಳ್ಳಿ ನಾ
ಮರುಗಿ ಕೊರಗುವ ಮಸಣದ ಮೌನ ನಾ
ನೀ ನಿರದ ಜಗವ ನಾ ಕಾಣುವ ದಿನ

ವಿಘ್ನ ಗೊಂಡ ಭಗ್ನ ಪ್ರೇಮದ ನೋವು
ಕಾಲದ ಅನಿರೀಕ್ಷಿತ ಕಹಿ ನಿರ್ಧಾರದ ಕಾವು
ಕಾಡ ದಿರಲಿ ನಮ್ಮನ್ನು ನೀಡದೆ ಯಾವುದೇ ಸುಳಿವು
ಇರಲಿ ನೀ ಬರುವ ದಾರಿಯ ಕಾಯುತ ನಾನಿಹೆನೆಂಬ ಅರಿವು

Monday, July 09, 2007

ಗೆಳತಿ, ನೀನತ್ತಾಗ ಉದುರಿದ ಹನಿಗಳು
ಹೇಳಲಾರವು ದುಃಖದ ಕಾರಣಗಳು
ಎಲ್ಲ ವಿಷಯಗಳ ಈಗಲೇ ಹರಡು
ಮೊದಲು ನಿನ್ನ ಮನಸ್ಸನ್ನು ನನ್ನೆದುರು ಬಿಚ್ಚಿಡು

ಕೊಡಲಾರೆ ಅಷ್ಟೂ ಕಷ್ಟಗಳ ನಿವಾರಿಸುವ ಭರವಸೆ
ಕಡೇಪಕ್ಷ ಸೋಲಲಾರೆ ತುಂಭಲು ನಿನ್ನಲಿ ಹೊಸ ಆಸೆ
ತಡಮಾಡದೆ ಹಿಂದಿನದನ್ನು ಮರೆತು ಧೈರ್ಯ ತಂದುಕೋ
ಚಿಂತಿಸದೇ ನನ್ನ ಮಾತನು ಅರಿತು ಕಣ್ಣೀರೊರೆಸಿಕೊ

ನೆನಪಿಡು ಅಳಲಾರದ ಮಾನವ ಜೀವಿ ಇಲ್ಲ ಜಗದಲಿ
ನಿರಾಳವಾಗಿರು ಈ ಮಾತಿಗೆ ಹೊರತಲ್ಲ ನೀನೂ ಇಲ್ಲಿ
ಕಳೆದು ಹೋದ ಕ್ಷಣಗಳು ಉಳಿದುಬಿಡಲಿ ನೆನಪಾಗಿ
ಪ್ರಾರ್ಥಿಸುವ ಮುಂಬರುವ ದಿನಗಳು ಆಗಿರಲಿ ಸುಂದರ ಕನಸಾಗಿ

ಭವಿಷ್ಯದ ಕನಸುಗಳು ಕೊಚ್ಚಿ ಹೋಗದಿರಲಿ
ಕೊನೆಯೆ ಇರದ ನಿನ್ನ ಕಣ್ಣೀರ ಪ್ರವಾಹದಲಿ
ದುಃಖದ ಕಟ್ಟೆ ಒಡೆಡಾಗ ಚಿಮ್ಮುವ ಕಣ್ಣೀರು ಸಹಜ
ಕಣ್ಣೀರಾಗಲಿ ಜೀವ ಜಲ ಬೆಳೆಯಲು ಸುಂದರ ಬಾಳಿನ ಕಣಜ

ಕಣ್ಣೀರಾಗಿ ಕರಗಬೇಡ, ನಗುವ ಹೂವಾಗು
ಚಿಂತಿಸಿ ಫಲವಿಲ್ಲ, ಸಮಸ್ಯೆಯ ಮೂಲ ಹುಡುಕು
ಹರುಷ ಭರಿತ ದಿನಗಳು ನಿನ್ನದಾಗಲಿವೆ, ಕಾಯುವ ಸಹನೆ ಇರಲಿ
ನೀನೊಂಟಿಯಲ್ಲ, ಈ ಗೆಳೆಯ ಇರುವನು ಎಂದೆಂದೂ ಜೊತೆಯಲ್ಲಿ

Wednesday, July 04, 2007

ಭಾವುಕತೆ

ನಿನ್ನ ಪಿಸು ಮಾತು ಕೇಳಿದಂತಾಯ್ತು
ಓಡಿ ಬಂದು ನೋಡುವಷ್ಟರಲ್ಲಿ
ಅದು ಭ್ರಮೆ ಎಂಬ ಸತ್ಯ ಅರಿವಾಯ್ತು

ಇನ್ನೂ ಮೊಳಗುತಿದೆ ದಶ ದಿಕ್ಕುಗಳಲ್ಲಿ
ನಿಲ್ಲದೇ ನಿನ್ನ ಪಿಸು ಮಾತಿನ ಪ್ರತಿ ಧ್ವನಿ
ಅವು ಬಂದು ಆವರಿಸಿದಂತಾಗಿವೆ
ನನ್ನ ಮೈ ಮನದಾಳದಲ್ಲಿ

Wednesday, June 20, 2007

ಪ್ರಕೃತಿಯ ಪಾಠ

ಎಲ್ಲೋ ಹುಟ್ಟಿ ಬೆಳೆದು ಅರಳಿ ನಿಂತು ನಗುವ ಹೂವು
ಮತ್ತೆಲ್ಲಿಂದಲೋ ಹಾರಿ ತೂರಿ ಬರುವ ಜೇನಿಗೆ
ತನ್ನ ಮಧುರ ಮಕರಂದ ಸೂಸುವ ಪ್ರಕ್ರಿಯೆಗೆ
ಏನೆಂದು ಹೆಸರಿಡಲಿ?


ದೂರದ ಮರದ ಟೊಂಗೆಯ ಮೇಲೆ
ಸಾವಿರಾರು ಜೇನು ಹುಳುಗಳ ಸುಂದರ ಗೂಡಿನ ನೆಲೆ
ಅಲ್ಲಿ ದಿನಗಟ್ಟಲೇ ಮಧುವ ಸಂಗ್ರಹಿಸುವುದೇ ಹುಳುಗಳ ಶೈಲಿ
ಈ ನಿರಂತರ ಕಾಯಕಕೆ ಏನೆನ್ನಲಿ..?


ಕೂಡಿ ಬಾಳುವ ಸುಖಕೆ ಉತ್ತಮ ನಿದರ್ಶನ
ಜೇನು ಹುಳುಗಳ ಈ ಅದ್ಭುತ ಪ್ರದರ್ಶನ
ನಾನು ತಾನು ಮೇಲೂ ಕೀಳು ಇವೆಲ್ಲ ಯಾವುವೂ ತಿಳಿದಿಲ್ಲ
ಗೊತ್ತಿರುವುದೊಂದೇ - ಅದು ಒಗ್ಗಟ್ಟಿನ ಕೆಲಸ!
ಈ ಸಾಂಘಿಕ ಹೋರಾಟದ ಕೆಚ್ಚು ನಮ್ಮಲ್ಲೇಕಿಲ್ಲ..?


ಪ್ರಕೃತೀಯೇ ನಮಗೆ ಬದುಕುವ ಪಾಠವನ್ನು ಈ ರೀತಿ ಕಲಿಸುತಿರುವಾಗ
ಅದನ್ನು ಅರಿಯದೇ ನಮ್ಮ ಹಳೆ ಕಟ್ಟು ಪಾಡುಗಳಿಗೇ
ಬೆಲೆ ಕೊಟ್ಟು ಬಾಳುತಿರುವ ನಾವು
ನಮ್ಮೀ ಹುಚ್ಚುತನ ಬಿಡುವುದಾದರೂ ಯಾವಾಗ..?

Tuesday, June 19, 2007

ಭಗ್ನ ಪ್ರೇಮ

ತೋಚಲಿಲ್ಲ ನನಗೆ ನೀನಂದು ತೋರಿದ
ಒಲವಿನ ಭಾವನೆಗಳ ಬಸಿದು ಬರೆದ ಪತ್ರವದು
ನಿನ್ನ ಮನದ ಬನದಲ್ಲಿ ನಾ ಬಿತ್ತು ಹೋದ
ಪ್ರೀತಿಯ ಬೀಜದ ಫಲವೆಂದು


ಅರ್ಥವಾಗಲಿಲ್ಲ ನೀನಂದು ಹೇಳಿದ ಮಾತದು
ನನ್ನ ಒಂಟಿಯಾಗಿ ಆ ನದಿ ತೀರದಿ ಬರ ಹೇಳಿ
ನಮ್ಮ ಸ್ನೇಹವನ್ನು ಪ್ರೀತಿಯಾಗಿ ಮಾರ್ಪಡಿಸುವ
ಹೊಸ ಮುನ್ನುಡಿಯ ಚೆನ್ನುಡಿಯೆಂದು


ಸೋತು ಹೋದೆ ನಿನ್ನ ಪ್ರೀತಿಯ ಪರಿಯ ಅರಿಯದಾದೆ
ನಿನ್ನ ಒಲವಿನ ಸಾಗರದ ಆಳವ ಅಳೆಯದಾದೆ
ಚಿಗುರೊಡೆಯ ಬಹುದಿದ್ದ ಪ್ರೇಮವನ್ನು
ನಾನೇ ಹೊಸಕಿ ಹಾಕಿದೆ ನಿನ್ನ ಆ ದಿನದ ಮಾತು ಕೇಳದೇ


ಭಗ್ನ ಪ್ರೇಮದ ವಿರಹ ವೇದನೆ ನಿನಗೆ ಅಲ್ಲಿ
ಜೀವನವಿಡೀ ಒಂದು ನಿಷ್ಕಲ್ಮಷ ಪ್ರೀತಿಯನ್ನು
ಸೀಳಿ ಹಾಕಿದ ತಪ್ಪು ಭಾವನೆ ನನಗಿಲ್ಲಿ


ತಾನಾಗಿ ಒಲಿದು ಬಂದ ಪ್ರೇಮವು
ಕಾಲಡಿ ಬಂದಾಗ ನಾ ಕುರುಡನಾಗಿ ಹೋದೆ
ಕಾಲ ಉರುಳಿದ ಹಾಗೆ ಅದೇ ಪ್ರೇಮ ಬೇಕೆಂದು
ನಾ ಹಂಬಲಿಸಿದಾಗ ನೀ ಕಿವುಡಿಯಾಗಿ ಹೋದೆ


ಅರಸುತಲಿರುವೆ ಹೊಸ ಪ್ರೇಮ ಭಿಕ್ಷೆ ಕೊಡುವ ದೇವಿಯನ್ನು
ಸಿಗಲಾರದ ವಸ್ತುವೇನಲ್ಲ ಅದು ಪ್ರಯತ್ನಿಸು
ಎಂದು ನೀನು ಇತ್ತೀಚೆಗೆ ಪುನಃ ಸಿಕ್ಕಾಗ ಹೇಳಿದ ಮಾತಿನ ಹುರುಪಿನಿಂದ
ತಿಳಿದಿದೆ ಮತ್ತೆ ನೀ ನನಗೆ ಸಿಗಲಾರೆಯೆಂಬ ಸತ್ಯ
ಕಾರಣ ನೀನಾಗಲೇ ಕಂಡುಕೊಂಡಿರುವೆ ನಿನ್ನ ನಿಜ ಪ್ರೇಮವನ್ನು

ಹರೆಯ ಹರಿವ ಸಮಯ

ಸದ್ದಿಲ್ಲದೇ ಸಾಗುತಿದ್ದ ಬಾಲ್ಯವು
ಹಠಾತ್ತನೆ ಜಾರಿಹೋಗಿದೆ
ಮುಗ್ಧ ಮಾತುಗಳು ಇನ್ನಿಲ್ಲದಂತಾಗಿವೆ
ಹೊಸತನ ಬಯಸಿದ ದೇಹವು
ಪ್ರಾಕೃತಿಕ ಬದಲಾವಣೆಗೆ ಮೈಯೊಡ್ದಿದೆ

ಇದು ಹದಿನೈದರ ಪ್ರಾಯ
ಪ್ರಾಯಶಃ ಹುಡುಗನ ಬಾಳಲಿ
ಯುವ ಚೈತನ್ಯ ಮೂಡುವ ಕಾಲ
ಈ ವಯೋಮಾನದ ತರುವಾಯ


ಬೆಣ್ಣೆಯಂತಿದ್ದ ಮುಖಾರವಿಂದದಲ್ಲಿತ್ತು
ಕೇವಲ ಹುಬ್ಬುಗಳೆಂಬ ಎರಡು ಸುಂದರ ಕಮಾನು
ಸುಳಿವು ನೀಡದೆ ಅರಳಿದ್ದಾರೆ ಗಡ್ಡ ಮೀಸೆ ಗಳೆಂಬ
ಹೊಸ ಸ್ನೇಹಿತರು ಸ್ವಾಗತಿಸಲೇ ಬೇಕಿದೆ ಇವರನ್ನು


ಹೆಣ್ಣು ಗಂಡೆoಬ ಭೇದವಿಲ್ಲದ ದಿನಗಳು
ಇನ್ಮುಂದೆ ಸಿಗಲಾರದೆಂಬ ದುಗುಡ ಒಂದೆಡೆ
ಆಗ ಕಂಡ ಚೋಟು ಲಂಗದ ಹುಡುಗಿ ಈಗ
ಕಣ್ಮುಂದೆ ಸುಳಿದರೆ ಹಿಂದಿರದಿದ್ದ ಚಂಚಲತೆ ಮತ್ತೊಂದೆಡೆ


ವಿಸ್ಮಯ ಭಾವಗಳು ವಿಜೃಂಭಿಸುವ ಹರೆಯವಿದು
ನಮ್ಮ ಯುವ ಜೀವ ಗಳು ತಮ್ಮದೇ
ಕನಸಿನ ಲೋಕ ವನ್ನು ಸೃಷ್ಟಿಸಿಕೊಳ್ಳವ ನೆಲೆ ಇದು
ಸುಂದರ ಸ್ವಪ್ನಗಳ ಸೆಳೆಯುವ ಮೋಹಕ ಬಲೆ ಇದು


ಹರೆಯ ಬರುವುದೇಕೋ? ಬಂದು ಕಾಡುವುದೇಕೋ?
ಬಾಲ್ಯ, ಯೌವ್ವನ, ಮುಪ್ಪುಗಳ ಕಾಂಡಗಳ ಜೊತೆ
ಮಧ್ಯೆ ಸಿಲುಕಿರುವುದೇ ಹರೆಯವೆಂಬ ಮಾದಕತೆ
ಬಾಲ್ಯ ಮರೆತು ಹೊಸ ಜೀವನ ಪ್ರಾರಂಭಿಸಬೇಕೋ..?
ಮುಂಬರುವ ಮುಪ್ಪಿನ ಚಿಂತೆ ದೂಡಲು ಈಗಲೇ ಹುರುಪಿನಿಂದ ದುಡಿಯಬೇಕೋ..?
ಈ ಪುರುಷಾರ್ಥದ ಮಹಿಮೆ ಅರಿಯಾದಂತಾಗಿದೆ ಮನಸಿಗೇಕೋ!

Friday, June 15, 2007

ಬಾಲ್ಯದ ಗೆಳತಿ

ಆಡಿ ಪಾಡಿ ಬೆಳೆದವರು ನಾವು ಚಿಕ್ಕಂದಿನಿಂದಲೂ
ಕಾರಣ ಇಬ್ಬರಿಗೂ ತಿಳಿದಿಲ್ಲ ನಾವಿಬ್ಬರು ಈಗ ದೂರವಾಗಿರಲು
ಆಗಿದ್ದವು ಆ ಬಾಲ್ಯದ ದಿನಗಳು ಆನಂದ ಮಯ
ಅಂಥ ಅಪೂರ್ವ ಕ್ಷಣಗಳು ಈಗ ಮಾಯಾ!


ಜಾಗದ ಪರಿವೆ ಇಲ್ಲದಂತೆ ಆಡಲು
ಬರುತಿದ್ದಳು ನನ್ನೊಂದಿಗೆ ಕಣ್ಣಾ ಮುಚ್ಚಾಲೆ
ನಾನೂ ಉತ್ಸುಕ ನಾಗಿ ಆಡುತಿದ್ದೆ ಅವಳೊಡನೆ ಕುಂಟು ಬಿಲ್ಲೆ
ಈಗ ಸಾಧ್ಯವಿಲ್ಲ ಆ ರೀತಿ ನಮಗೆ ಕೂಡಲು


ಜೊತೆ ಜೊತೆಗೆ ಆಡುತಿದ್ದೆವು ಜಾರು ಬಂಡಿ ಆಟ
ಮರೆಯದೇ ದಿನಾ ಆಡುತಿದ್ದೆವು ಜೂಟಾಟ
ಮುಂದೊಂದು ದಿನ ಇಬ್ಬರೂ ದೂರವಾಗುವ ಪರಿವೆ ಇಲ್ಲದೇ
ಊರೂರಿನ ಸುತ್ತಾಟವೂ ಇತ್ತು ಹಿರಿಯರಿಗೆ ಹೇಳದೇ ಕೇಳದೇ


ದೈನಂದಿನ ಕಠಿಣ ಪಾಠಗಳಿಗೆ ಇವಳದೇ ಸಹಾಯ
ಪರೀಕ್ಷೆ ಗಳಲ್ಲೂ ಉತ್ತರ ಪತ್ರಿಕೆ ತೋರಿಸುವ ಸಹೃದಯ
ಬೇಸಿಗೆ ರಜೆಗಳಲ್ಲಿ ಸಾಗೂತಿತ್ತು ಬೆಟ್ಟ ಗುಡ್ಡಗಳ ಪಯಣ
ಅಂಥಾದ್ದೊಂದು ಅನುರಾಗ ಬೆಳೆದಿತ್ತು ಇಲ್ಲದೇ ಯಾವುದೇ ಕಾರಣ

ದಿನಕಳೆದಂತೆ ಇಂಥದ್ದೊಂದು ಸ್ನೇಹ
ಕ್ರಮೇಣ ಕಡಿಮೆಯಾಯಿತು
ಕೆಲವರ ಗುಸು ಗುಸಿನಿಂದ ತಿಳಿಯಿತು ಆಕೆ ಋತುಮತಿ ಯಾಗಿದ್ದಾಳೆಂದು
ಹಿರಿಯರು ಹೇಳಿದ ಹಾಗೆ ಆಕೆ ಹಿಂದಿ ನಂತೆ ನನ್ನೊಂದಿಗೆ ಆಡುವಂತಿರಲಿಲ್ಲ ಸಹ

ಇವೆಲ್ಲ ನನ್ನ ನೆನಪಿಗೆ ಬಂದದ್ದು
ಮೊನ್ನೆ ನಾನಾಕೆಯನ್ನು ಈ ಊರಿನಲ್ಲಿ ನೋಡಿದ ದಿನದಂದು
ಹೊತ್ತು ಕೊಂಡಿದ್ದಳು ಕಂಕುಳಲ್ಲೊಂದು ಮುದ್ಡದ ಮಗು
ಮುಖಾರವಿಂದದಲ್ಲಿ ಅದೇ ಮಾಸದ ನಗು
ತಕ್ಷಣ ನನಗೆ ನೆನಪಾಗಲಿಲ್ಲ ಆಕೆಯ ಗಂಡ ಪಕ್ಕದಲ್ಲಿದ್ದದ್ದು

ಈಗಲೂ ಆಶ್ಚರ್ಯ ಪಡುವ ವಿಷಯವೆಂದರೆ
ಈಕೆ ನಮ್ಮ ಊರಿನಲ್ಲಿದ್ದ ಹಾಗೆಯೇ ಇರುವುದು
ಮುಖ ರೂಪು ಗೆಟ್ಟಿರಲಿಲ್ಲ
ಅಂದಿನ ರೂಪವೇ ಈಗಲೂ ಇದೆಯಲ್ಲ


ಬೆಂಗಳೂರೆಂಬ ಬೆಂಗಳೂರಿಗೆ ನಾ ಬಂದದ್ದು
ಹೊಸ ಕೆಲಸ ಹುಡುಕಲು
ಆದರೆ ನನ್ನ ಕಣ್ಣು ಮೊದಲು ಹವಣಿಸಿದ್ದು
ಬಾಲ್ಯದ ಗೆಳತಿಯ ನೆನಪ ಬಿಚ್ಚಲು


ನನ್ನ ಕಾಲುಗಳು ಬೆಳೆಸಿದವು ಪಯಣ
ಅವಳೊಂದಿಗೆ ಮಾತನಾಡಲು
ಸುಮಾರು ಹನ್ನೆರಡು ವರ್ಷಗಳ ನಂತರ ನಾವಿಬ್ಬರು ಬೇರೆ ಊರಿನಲ್ಲಿ ಎದುರು ಬದುರು!
ನನ್ನ ದುರಾದೃಷ್ಟ! ಆಕೆ ನನ್ನ ಗುರುತು ಹಿಡಿಯದಾದಳು
ಎದೆಯಲ್ಲಿ ಸಣ್ಣ ಝರಿ ಸರಿದಂತಾಯಿತು


ನಮ್ಮ ಹಳೆಯ ಪರಿಚಯ ಹೇಳುವ ಧೈರ್ಯ ಬರಲಿಲ್ಲ
ಆಕೆಯ ಮನದಲ್ಲಿ ನನ್ನ ಹಳೆಯ ರೂಪವೇ ಇರಬೇಕಲ್ಲ ?
ಅದೇ ಚಿರಕಾಲ ಉಳಿದು ಬಿಡಲಿ ಅಲ್ಲಿ ಎಂಬ ಮನಸಾಯಿತು
ಜಾಗ ಬಿಟ್ಟು ಹೊರಡುವಾಗ ಹೆಜ್ಜೆಗಳೆಲ್ಲ ಭಾರವಾಯಿತು

Saturday, June 09, 2007

Maddy's: ತೋಚಿದ್ದು ಗೀಚಿರುವೆ!

Maddy's: ತೋಚಿದ್ದು ಗೀಚಿರುವೆ!

ಮಳೆಗಾಲ!

ಮಳೆಗಾಲ!
ಅಬ್ಬಾ! ಈ ಕಾಲ ಆರಂಭ ವಾಯಿತೆಂದರೆ
ಮೈ ಮನಗಳ ಸುಳಿಯಲ್ಲಿ
ಹುದುಗಿರುವ ಶಾಶ್ವತ ನೆನಪುಗಳ ಜಲಧಾರೆ!



ಮಳೆ ಬರುವ ಚೆಂದವ ತೋರಿ
ಬಾಯಿಗೆ ಅನ್ನ ತುರುಕುತಿದ್ದ ಅಮ್ಮನ ತಾಳ್ಮೆ ನೆನಪಿದೆ
ಮುಂಗಾರು ಮಳೆಯಲಿ ನೆನೆದ ಹಸಿ ಕೆನ್ನೆಗೆ
ಬಿಸಿ ಮುತ್ತು ಕೊಟ್ಟ ನಲ್ಲೆಯ ಪ್ರೀತಿಯ ಜಾಣ್ಮೆ ನೆನಪಿದೆ
ತನ್ನ ಮೊಮ್ಮಗು ಎಲ್ಲಿ ನೆನೆವುದೋ ಎಂಬ ಆತಂಕದೊಂದಿಗೆ
ಅಜ್ಜಿ ಕೊಡೆ ಹಿಡಿದು ಶಾಲೆಗೆ ನುಗ್ಗಿದ ದಿನಗಳು ಎಷ್ಟಿಲ್ಲ!


ಮುಂಗಾರು ಮಳೆ ಜೊತೆ ಜೊತೆಗೇ ಪಟ ಪಟನೆ
ಬೀಳುತಿದ್ದ ಆಲಿಕಲ್ಲುಗಳ ನೆನಪಿದೆಯೇ?
ಆ ಕಲ್ಲುಗಳ ಆಯ್ದು ಕೊಂಡು ನುಂಗಿದ ನೆನಪು ಮಾಸಿಲ್ಲ ತಾನೇ?
ಅಡಿಯಿಂದ ಮು ಡಿ ವರೆಗೂ ಮಳೆಯಲ್ಲಿ ನೆನೆದ ತಪ್ಪಿಗೆ
ಶಿಕ್ಷೆಯಂತೆ ಬರುತಿದ್ದ ನೆಗಡಿಗಳಿಗೆ ಬರವಿತ್ತೇ?!



ಬಸವಳಿದ ಧರೆ ಬಿಸಿಲ ತಾಪ ತಾಳದೇ ಬಿರುಕು ಬಿಟ್ಟ ಕಾಲದಲ್ಲಿ
ಧೋ ಎಂದು ಸುರಿವ ಮಳೆಗೆ ಭೂತಾಯಿಯ ತಂಪು ಮಾಡುವ ಕೆಲಸವಾದರೆ
ಹುರುಪುಗೊಂಡ ಗಾಳಿಗೆ ಮಣ್ಣಿನ ವಾಸನೆ ಊರ ತುಂಬಾ ಪಸರಿಸುವ ಕೆಲಸ
ಆಗಾಗ ಕಾರ್ಮೋಡ ಗಳ ಮಧ್ಯೆ ಬಿಸಿಲ ಸಂಚಾರ
ಫಲವಾಗಿ ಮೂಡುತಿತ್ತು ಕಾಮನಬಿಲ್ಲಿನ ಚಿತ್ತಾರ!


ಮಳೆ ಬಿದ್ದ ಮಾರನೆಯ ಬೆಳಿಗ್ಗೆಯ ಅನುಭವವೇ ಬೇರೆ
ಮನೆಯಂಗಳದ ಗುಲಾಬಿ ಗಿಡದ ಮೇಲೆ
ರಾಶಿ ರಾಶಿ ಇಬ್ಬನಿ ಹನಿಗಳ ಮಾಲೆ
ಜೋಕಾಲಿ ಹಾಡುತ ಆಗಲೋ ಈಗಲೋ ಉದುರಿಬಿಡುವ
ಇಬ್ಬನಿ ಹನಿಗಳ ಸೊಗಸೇ ಸೊಗಸು


ಕೆಂಪು ಗುಲಾಬಿಯಮೇಲೆ ಕೆಂಪು
ಹನಿಯಂತಾಗುವ ಭಾಗ್ಯ ಇಬ್ಬನಿಯದು
ಅಲ್ಪ ಕಾಲವಾದರೂ ತನ್ನ ಸೌಂದರ್ಯವ ಹೆಚ್ಚಿಸಿದ
ಮಳೆರಾಯನಿಗೆ ಗುಲಾಬಿ ವಂದನೆ ಹೇಳಿದಂತೆ ತಲೆ ಬಾಗಿಹುದು

ಇಂಥ ಅನೇಕ ಪವಾಡ ಮಾಡುವ ಮಳೆಗಾಲದು ಎಂಥ ಮರ್ಮ?
ಅದಕ್ಕೆ ಉಳಿದೆಲ್ಲ ಕಾಲಕ್ಕಿಂತ ಈ ಕಾಲ ಚೆನ್ನ ಎನಿಸುವುದು ಅತಿಶಯೋಕ್ತಿ ಅಲ್ಲ
ಕಾಲ ಉರುಳಿ ಕಾಲ ಮರಳಿ ಬರುವುದು ಪ್ರಕೃತಿ ಧರ್ಮ
ಮಳೆ ಬಂದು ಹೋಗುವ ಈ ಪರಿಯ ಕಂಡು ಮನಸು ಹೂವಂತಾಗಿರುವುದು ಸುಳ್ಳಲ್ಲ!

Saturday, June 02, 2007

ಹುಟ್ಟುಹಬ್ಬದ ಕಾಣಿಕೆ

ಮುಡಿಪಿರಲಿ ನಮ್ಮೆಲ್ಲರ ಹುಟ್ಟುಹಬ್ಬದ ದಿನಗಳು ನಮ್ಮ ಹೆತ್ತಮ್ಮನಿಗಾಗಿ
ಹೇಳೋಣ 'ಅಮ್ಮ ನಾನಿಂದು ಏನಾಗಿದ್ದರು ಅದು ನಿನ್ನಿಂದಾಗಿ'
ನವಮಾಸಗಳ ಯಾತನೆಗಳ ಅಣು ಅಣು ವನ್ನು ಅನುಭವಿಸದವಳು
ತನ್ನೋಡಲಲ್ಲಿದ್ದ ಭ್ರೂಣ ವನ್ನು ಬಚ್ಚಿಟ್ಟು ಸಲಹಿದವಳು


ನಾವು ಹುಟ್ಟುವ ಮೊದಲೇ ನಮಗಾಗಿ ಕುಲಾವಿ ನೇಯ್ದವಳು ಇವಳು
ಹುಟ್ಟಲಿರುವ ಕಂದನ ರೂಪವನ್ನು ಮನಸಿನಲ್ಲಿಯೇ ಬಿಡಿಸಿದ್ದಳು
ತನ್ನ ಭವಿಷ್ಯದ ಆಶಕಿರಣ ತನ್ನ ಮಗುವಾಗಲಿದೆ ಎಂದು ಆಸೆ ಪಟ್ಟವಳು
ಒಡಲಲ್ಲಿ ಕಂದನ ಆಟವನ್ನು ಸಂಭ್ರಮದಿಂದ ಅನುಭವಿಸಿದವಳು


ನಮಗೆ ತಿಳಿದಿರಲಾರದು ನಾವು ಹುಟ್ಟಿದ ಮರುಕ್ಷಣವೇ
ಸ್ವರ್ಗಕ್ಕೆ ಮೂರೇ ಗೇಣು ಎಂದು ಮೊದಲು ಬೀಗಿದ್ದು ನಮ್ಮಮ್ಮ
ಮಡಿಲಿಗೆ ಬಿದ್ದೊಡನೆ ಕಣ್ಣರಳಿಸಿ ಸಿಹಿ ಮುತ್ತು ಕೊಟ್ಟವಳು ನಮ್ಮಮ್ಮ
ಶಿಶುವಿನ ಕಿವಿ ಗಡ ಚಿಕ್ಕುವ ಅಳು ಕೇಳಿದ ಕ್ಷಣವೇ
ಮೊಲೆ ಕೊಟ್ಟು ಭೂಲೋಕದ ಅಮೃತ ಕುಡಿಸಿದಳು ನಮ್ಮಮ್ಮ

ತಾನು ಎಲ್ಲ ಕಡೆ ಇರಲಾರೆ ಎಂದು ಹೇಳಿದ ದೇವನು
ಪ್ರತಿಯೊಂದು ಮನೆಯಲ್ಲೂ ಸೃಷ್ಟಿಸಿದನಂತೆ ತಾಯಿಯನ್ನು
ಪ್ರತ್ಯಕ್ಷವಾಗಿ ಕಾಣುವ ದೇವಿಗೆ ಮೀಸಲಿಡುವ ನಮ್ಮ
ಪ್ರತಿ ಹುಟ್ಟುಹಬ್ಬದ ಸವಿ ನೆನಪನ್ನು


ಘಟಿಸಿ ಹೋಗುವ ನಮ್ಮ ಜೀವನ ಪರ್ಯಂತ
ತಾಯಿ ತನ್ನದೊಂದು ಕುರುಹನ್ನು ಬಿಟ್ಟಿರುತ್ತಾಳಂತೆ
ಹೊಟ್ಟೆಯ ನಡು ಭಾಗದಲ್ಲಿ ಇಹುದು ಅವಳು ಕೊಟ್ಟ ಹೊಕ್ಕುಳ ಕುಳಿ
ಪ್ರತಿ ದಿನ ಅದೇ ನೆನಪಿಸುವುದು ಇದೇ ನಿನ್ನ ತಾಯಿಯ ಕರುಳ ಬಳ್ಳಿ


Thursday, May 31, 2007

ಪಾರ್ಕಿನ ಮೆಲುಕು

ಒಂದು ದಿನ ಹೀಗೇ ನನ್ನ ಕಾಲಹರಣ ಆ ಪಾರ್ಕಿನಲ್ಲಿ ನಡೆದಿತ್ತು
ಎಷ್ಟೋ ವಿಚಿತ್ರ ಮುಖಗಳ ದರ್ಶನವಾಗುವುದು ಅಲ್ಲಿ ಸಾಮಾನ್ಯವೂ ಆಗಿತ್ತು
ಪ್ರತಿ ಯೊಂದು ಮುಖಗಳಲ್ಲೂ ಒಂದಲ್ಲಾ ಒಂದು ನೋವು ಬೇಗುದಿಗಳ ಸರಮಾಲೆ
ಒಬ್ಬನ ಮುಖದಲ್ಲಿ ದುಖದ ಕಟ್ಟೆ ಒಡೆದಂತಹ ಕಣ್ಣೀರು
ಮತ್ತೊಬ್ಬನ ಕಂಗಳಲ್ಲಿ ಭವಿಷ್ಯದ ಆಸೆಯೆ ಇಲ್ಲ ದಂತಹ ನಿರ್ಲಿಪ್ತತೆ


ಆಗೋ ಅಲ್ಲಿ ಹುಡುಗಿಯೊಬ್ಬಳ ಮುಗಿಯದ ಸುತ್ತಾಟ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ...
ಯಾರಿಗೋ ಕಾಯುತಿರಬೇಕೆಂದುಕೊಂಡೆ
ನನ್ನ ಗ್ರಹಿಕೆ ಸುಳ್ಳಾಗಲಿಲ್ಲ
ಅಲ್ಲೊಬ್ಬ ಬಂದೆ ಬಿಟ್ಟ ಅವಳ ಬಳಿ ಕೈಯಲ್ಲೊಂದು ಕೆಂಪು ಗುಲಾಬಿಯ ಹಿಡಿದು!
ಅಂದು ಪ್ರೇಮಿಗಳಿಬ್ಬರ ಮೊದಲ ಅಧಿಕೃತ ದಿನ ಆರಂಭ ವಾಗಿತ್ತು


ನನ್ನ ಪಕ್ಕದ ಕುರ್ಚಿಯಲ್ಲಿದ್ದವ ಇವರಿಬ್ಬರನ್ನು ಗಮನಿಸುತಿದ್ದನೇನೋ!
ಒಬ್ಬನೇ ಗೊಣಗಿಕೊಂಡ "ಹ್ಹಿ ಹ್ಹಿ ಹ್ಹಿ ಇಬ್ಬರಿಗೂ ಮಾಡಲು ಕೆಲ್ಸಾ ಇಲ್ಲ"
"ಇವತ್ತು ಹೀಗೇ ನಾಳೆ ಮತ್ಯಾಗೋ"
ಪ್ರಾಯಶಃ ಭಗ್ನ ಪ್ರೇಮಿ ಇರಬೇಕೆಂದು ಸುಮ್ಮನಾದೆ


ನನ್ನ ಹಾಗೆ ಕೆಲಸವಿಲ್ಲದೇ ಕಾಲಹರಣ ಮಾಡುವ ಸೋಮಾರಿಗಳು
ಇಂತಹ ಅಮರ (?) ಪ್ರೇಮಿಗಳ ಸಮ್ಮಿಲನ
ಎಷ್ಟೋ ಮುಗ್ಧ ಜನರ ನೋವಿನ ಆಕ್ರಂದನ
ಮಕ್ಕಳನ್ನು ಆಡಿಸಲು ಬರುವ ತಾಯಂದಿರು
ಇಳಿ ವಯಸ್ಸಿನಲ್ಲೂ ವ್ಯಾಯಾಮದ ನೆಪ ಹೇಳಿ
ಹೆಂಗಸರನ್ನು ನೋಡಲು ಬರುವ ಚಪಲ ಚನ್ನಿಗರಾಯರ ವರಸೆ
ಇಲ್ಲಿ ಇಂದಿನ ಪ್ರತಿದಿನದ ವಿಶೇಷಗಳು!


ಇವಿಷ್ಟೆಲ್ಲದರ ಮಧ್ಯೆಯೂ ನನ್ನ ಬಾಲ್ಯದಲ್ಲಿ ನಾನಂದು
ಕಂಡಿದ್ದ ವೈಶಿಷ್ಟ್ಯಗಳೆ ಬೇರೆಯಾಗಿತ್ತು
ಅವು ಸಿವಿ ನೆನಪಿನ ಬುತ್ತಿಗಳು
ಬೆಳ್ಳಂ ಬೆಳಿಗ್ಗೆ ಇಲ್ಲಿ ನೆರೆಯುತಿದ್ದರು ನಮ್ಮ ನಾಡಿನ ಖ್ಯಾತ ಸಾಹಿತಿಗಳು
ಒಬ್ಬೊಬ್ಬರದೂ ವಿಶಿಷ್ಟ ವ್ಯಕ್ತಿತ್ವದ ಮಾಸದ ಗುರುತುಗಳು
ಪ್ರತಿ ದಿನವೂ ಸಾಹಿತ್ಯದ ಬಗ್ಗೆ ಚರ್ಚೆ ದೇಶದ ಬಗ್ಗೆ ಮಾತುಕತೆ
ಇವರೆಲ್ಲರ ಮಾತುಗಳನ್ನು ನಾನು ಕದ್ದು ಕೇಳುತಿದ್ದೆ ಮರೆಯಲ್ಲಿ
ಇಂಥ ಸುಂದರ ನೆನಪುಗಳ ನಾನು ಹೇಗೆ ಮರೆಯಲಿ



ಸಿಗುವುದೇ ನನಗೆ ಅಂಥ ಮತ್ತೊಂದು ಕಾಲ?
ಈ ಪಾರ್ಕಿನಲ್ಲಿ ಈಗಲೂ ಇದೆ ಸ್ನಿಗ್ಧ ಸೌಂದರ್ಯ
ಅಂದಿದ್ದ ಬೃಹತ್ ಮರಗಳ ಕೊರಗನ್ನು ಅಂದಿನ ಚಿಕ್ಕ ಮರಗಳು ಈಗ ನೀಗಿಸಿವೆ
ಎಂಥವರನ್ನು ನಿಬ್ಬೆರಗಾಗಿಸುವಂತೆ ಬೃಹದಾಕಾರವಾಗಿ ಬೆಳೆದಿದೆ
ಈಗಲೂ ಇದ್ದಾರೆ ಸಾಹಿತಿಗಳು ಆದರೆ ಅವರಿಗೆಲ್ಲ ಇಲ್ಲ ಅಂದಿದ್ದ ಸಾಹಿತಿಗಳ ಖದರು
ಎಲ್ಲಾ ಇದ್ದು ಏನೋ ಕಳೆದುಕೊಂಡಂತಹ ಸ್ಥಿತಿ ನಮ್ಮಂಥವರದು!


ಅಂದಿನ ಒಂದು ಜನಾಂಗವೇ ಮರೆಯಾಗಿದೆ
ಇಂದಿನ ಜನಾಂಗದಲ್ಲಿ ನಾನು ಇನ್ನೂ ಇದ್ದೇನೆ
ಕೆಲಸವಿಲ್ಲದೇ ಹರಟುವ ಹರುಕು ಬಾಯಿ ದಾಸನಾಗಿ
ಹಿಂದಿನ ದಿನಗಳ ಮೆಲುಕು ಹಾಕಲು ಕೊಡುವೆ ಪ್ರತಿದಿನ ಭೇಟಿ ಇಲ್ಲಿ


ಮತ್ತೆಷ್ಟು ದಿನ ನನ್ನ ಈ ಅವತಾರ?

ಒಂದು ದಿನ ನಾ ಕೂಡ ಒಂದು ನೆನಪಾಗಬಹುದು
ಇವೆಲ್ಲಕ್ಕೂ ಮೂಕ ಸಾಕ್ಷಿಯಾಗಿ ಹರಡಿದೆ ಈ ಪಾರ್ಕು ಸುತ್ತಾ ಮುತ್ತಾ

ಮತ್ತೆ ಸಾಗಿವೆ, ಸಾಗಲಿವೆ
ಇಂದು ಮತ್ತದೇ ಸತ್ವವಿಲ್ಲದ ಸಂಗತಿಗಳು ಅತ್ತ ಇತ್ತ!

Monday, May 28, 2007

ಪ್ರೀತಿಯ ಆಳ

ಅನಿಶ್ಚಿತತೆಯ ಕಾಲದಲ್ಲೂ
ನಿಶ್ಚಿಂತೆಯಿಂದ ಉಸಿರಾಡುವ ವಿಶ್ವಾಸವಿದೆ
ಭಗ್ನಗೊಂಡ ಭವಿಷ್ಯದಲ್ಲೂ
ಮಗ್ನನಾಗಿ ನಿನ್ನ ಪ್ರೀತಿಸುವ ತವಕವಿದೆ


ಆಗಲೇಬೇಕಾದ್ದೆಲ್ಲ ಆಗಿಬಿಡಲಿ
ಈ ಕ್ಷಣವೇ ಭೂಮಿ ಕಂಪಿಸಲಿ
ಸೃಷ್ಟಿಯ ಸರ್ವಸ್ವವೂ ನಾಶವಾದರಗಲಿ
ಅರೆ ಕ್ಷಣವಾದರೂ ನಿನ್ನೊಡನೆ ನಾನಿರುವ
ಅಲ್ಪ ಕಾಲವು ಶಾಶ್ವತ ಚೇತನವಾಗಲಿ

Monday, May 21, 2007

ರವಿ

ಮೂಡುವ ರವಿ ಮೂಡಣದಿ
ಬೆಳಕ ಬೀರಲು ಅರ್ಧ ಭೂಮಿಗೆ
ಮುಳುಗುವ ರವಿ ಪಡುವಣದಿ
ಇಲ್ಲಿ ಕತ್ತಲ ಹರಡಿ ಸಜ್ಜಾಗುವ ಬೆಳಕ ಸೂಸಲು ಇನ್ನರ್ಧದ ಇಳೆಗೆ


ದಣಿವಿಲ್ಲ ಅವನಿಗೆ ಖಂಡಿತ
ಭೇಧ ಮಾಡಲಾರ ಯಾರಿಗೂ ಕೊಡಲು ಬೆಳಕು
ಫಲ ಬೇಡದೇ ದುಡಿವನು ಅನವರತ
ಅವನ ಮನದಲ್ಲಿಲ್ಲ ಯಾವುದೇ ಹುಳುಕು


ಹುಟ್ಟುವಾಗ ಕೆಂಬಣ್ಣಡ ಜಳಕ
ಮುಳುಗುವಾಗಲೂ ಅದೇ ಸ್ನಾನದ ಪುಳಕ
ನೆತ್ತಿಯ ಮೇಲೆ ಬಂದಾಕ್ಷಣವೇ ತರುವ ಬಿಸಿ
ಸಂಜೆ ಹೊರಡುವ ವೇಳೆ ತೋರುವ ತಂಪು ಕನಿಕರ ಪೂಸಿ


ಇಡೀ ಬ್ರಹ್ಮಾಂಡವೇ ಹಾಕಬೇಕು ಪ್ರದಕ್ಷಿಣೆ ಇವನ ಸುತ್ತ
ತಾನು ಮಾತ್ರ ಜಗ್ಗಲಾರ ಅತ್ತ ಇತ್ತ
ತೋರುವ ವಿಶೇಷ ಪ್ರೀತಿ ಭೂಮಿಕೆಗೆ
ಕಾರಣ ನಾದ ಭೂಮಿಯ ಇಡೀ ಮನುಸಂಕುಲದ ಪ್ರಗತಿಗೆ


ನಮಗೆ ಕಾಣದ ದೇವರುಗಳು ಹಲವಾರು
ಕಾಣುವ ಪ್ರತ್ಯಕ್ಷ ದೈವವೇ ಸಾಟಿ ನಿನಗಾರು?
ಅವಿಶ್ರಾಂತ ದುಡಿಮೆಗೆ ಅರ್ಪಿಸಿಕೊಂಡ ಓ ಭಾಸ್ಕರ
ನಿನಗೆ ನಮ್ಮ ಕೋಟಿ ಕೋಟಿ ನಮಸ್ಕಾರ.

ಒಂದು ಜಿಜ್ಞಾಸೆ

ಲೇಖನಿಯಲಿ ಕವಿತೆಯಾಗಿ ಮೂಡಲು
ಹಿಂದೇಟಾಕುವ ನೀನು
ನಾ ಕುಂಚ ಹಿಡಿಯಲು ಚಿತ್ರವಾಗಿ ಉದ್ಭವಿಸಲು ಕಾರಣವೇನು?


ನಾನು ಒಬ್ಬ ಕೆಟ್ಟ ಕವಿಯೆಂಬ
ಸತ್ಯ ನಿನಗೂ ತಿಳಿದು ಹೋಯಿತೆ?
ಅಥವಾ ನಾನೊಬ್ಬ ಒಳ್ಳೆಯ
ಚಿತ್ರಕಾರನೆಂಬ ಭ್ರಮೆಯೇ?


ಬಿಳಿ ಹಾಳೆಯಲಿ ನಿನ್ನಂದವ
ವಿಶೇಷ ಪದಗಲ್ಲಿ ಹಿಡಿದಿಡುವ ಆಸೆ ಪಟ್ಟೆ
ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ
ನೋಡೋಣ ಚಿತ್ರವಾಗಿಯಾದರೂ ಮೂಡುವೆಯೇನೋ
ಎಂದು ಲೇಖನಿ ಪಕ್ಕಕ್ಕಿಟ್ಟೆ


ಹಿಂದೆಂದೋ ಅಭ್ಯಾಸವಿದ್ದ ಈಗ ಕೈಬಿಟ್ಟಿರುವ
ಕುಂಚವನ್ನು ಅದೇ ಬಿಳಿ ಹಾಳೆಯಲಿ
ಬಣ್ಣ ಬಣ್ಣದ ಮಿಶ್ರಣದಿ ಬಿಡಿಸಿದೆ ನಿನ್ನ ರೂಪವ
ಏನಾಶ್ಚರ್ಯ! ನಾನೆಣಿಸಿದಕ್ಕಿಂತ
ಅದ್ಭುತವಾಗಿ ಮೂಡಿ ಬಂದಿರುವೆ ನೀನು
ನಾನಂದು ಕಂಡಿದ್ದ ಅದೇ ರೂಪದಲ್ಲಿ


ಒಂದು ಮಾತಿದೆ - ನೂರು ಪದಗಳ
ಅಷ್ಟೂ ಅರ್ಥಗಳನ್ನು ಒಂದು ಚಿತ್ರವು
ಥಟ್ಟನೆ ಹೇಳಿಬಿಡುವುದಂತೆ
ಪದಗಳಿಗೆ ನಿಲುಕದ ಭಾವಗಳು
ಚಿತ್ರಗಳಲ್ಲೇ ನಿಲುಕುವುದಂತೆ!


ಹೇಗೋ ಏನೋ ನಾನಾಸೆ ಪಟ್ಟಂತೆ
ಕವಿತೆಯಾಗಲಿಲ್ಲ ನೀನು
ನಿನ್ನಾಸೆಯಂತೆ ನನ್ನ ಕುಂಚದಲ್ಲೇ ಉಳಿದುಬಿಟ್ಟೆ
ಆದರೆ ನನ್ನ ಜಿಜ್ಞಾಸೆ ಇನ್ನೂ ಮುಗಿದಿಲ್ಲ
ಲೇಖನಿ ಹಿಡಿಯಲೋ ಕುಂಚ ಹಿಡಿಯಲೋ ಎಂಬ ಚಿಂತೆಯಲಿ ಮುಳುಗಿಹೆನಲ್ಲ!

Thursday, May 17, 2007

ಪೇಚಾಟ

ವಿಚಿತ್ರ ಬಯಕೆಗಳ
ವಿಕ್ಷಿಪ್ತ ಸಾಗರದಲ್ಲಿ
ಮಿಂದೆದ್ದಂತಿದೆ ಮನಸು
ಸಹಸ್ರ ಕನವರಿಕೆಗಳಿಗೆ
ಸಾಕ್ಷಿಯಾಗಿ ಮೂಡಿದಂತಿದೆ
ಕಾಡುವ ಈ ಕನಸು


ಮನಸು ನೆನೆದಂತೆ
ತಪ್ಪದೇ ಕಾಣುವೆ
ಪ್ರತಿ ರಾತ್ರಿಯ ಕನಸು
ಕಾಣುವ ಕನಸೆಲ್ಲವೂ
ನಿಜವಾದರೆ ಅದೆಂಥ ಸೊಗಸು!


ಪ್ರತಿದಿನದ ಕಾಯಕವೇ ಬೇರೆ
ಮನಸು ಯಾಚಿಸುವುದೇ ಬೇರೆ
ತೃಪ್ತಿಯುಂಟೆ ಈ ಬದುಕಿಗೆ?
ಇಹ ಪರದ ಆಲೋಚನೆ ಬಿಟ್ಟು
ನಮ್ಮಷ್ಟಕ್ಕೆ ನಾವಿದ್ದರೆ ಸಾಕೆ?


ಎಲ್ಲೋ ಕೇಳಿದ ನೆನಪು
ಆಸೆಯೆ ದುಖಕೆ ಮೂಲ
ಎಲ್ಲೋ ಓದಿದ ನೆನಪು
ಆಸೆಯೆ ಇಲ್ಲದಿರೆ ಅದು ಜೀವನವೇ ಅಲ್ಲ!


ಒಡಲಾಳದ ಬೇಗುದಿ ಆರಲು
ಚಿಮ್ಮ ಬೇಕಿದೆ ನೆಮ್ಮದಿಯ ಕಾರಂಜಿ
ಮನದ ದುಗುಡ ದೂಡಲು
ಅರಳಬೇಕಿದೆ ಅಭಯದ ಅಪರಂಜಿ


ಎಷ್ಟೆಲ್ಲಾ ಪೇಚಾಟಗಳ ಮಧ್ಯೆ
ಒಳಮನಸು ಹೇಳುವ ಬುದ್ಧಿಯೇ ಬೇರೆ
'ಇಂದು ಉದುರಿಹೋದ ಹಣ್ಣೆಲೆ ಜಾಗದಿ
ಚಿಗುರಲಾರದೇ ಮತ್ತೆ ನಳನಳಿಸುವ ಚಿಗುರೆಲೆ?
ಕಾಯುತಿರು ನಿನ್ನ ದಿನ ಬರುವ ವೇಳೆ..'

ಲಿಲ್ಲಿ

ಪ್ರತಿಯೊಬ್ಬರ ಮಾನಸ ಸರೋವರದಲ್ಲಿ
ಮೂಡುವ ನೈದಿಲೆ ಯಂತೆ ಇರುವರು ಲಿಲ್ಲಿ
ಎಂದೆಂದೂ ಇರುವರು ನೆನೆದವರ ಮನದಲ್ಲಿ


ಈ ಹಿಂದೆ ಸಾವಿರಾರು ವಿದ್ಯಾರ್ಥಿ ಗಳಿಗೆ ಕಲಿಸಿದರು ವಿದ್ಯೆ
ಈಗ ಈ ತಾಣದಲ್ಲಿ ಕಲಿಸುತಿಹರು ಎಲ್ಲರಿಗೂ
ಬದುಕುವ ವಿದ್ಯೆ ಇದ್ದುಕೊಂಡು ನಮ್ಮೆಲ್ಲರ ಮಧ್ಯೆ


ಇದ್ದರೂ ಸಾಗರದಾಚೆಯ ದೂರದ ನಾಡಿನಲ್ಲಿ
ಇವರ ಮನಸ್ಸೆಂದೆಂದೂ ಇರುವುದು ಈ ಗಂಧದನಾಡಿನಲ್ಲಿ
ತಾವು ಎಲ್ಲೇ ಇದ್ದರೂ ಅವರ ಹೃದಯ ಮಿಡಿವುದು ತವರಿನಲ್ಲಿ
ಶರೀರ ಅಲ್ಲಿದ್ದರೂ ಅವರ ಶಾರೀರ ಪ್ರತಿಧ್ವನಿಸುವುದು ಕನ್ನಡಿಗರು ತಾಣದಲ್ಲಿ

ಇಗೋ ನಾವೆಲ್ಲಾ ಕೋರುತಿರುವೆವು ಲಿಲ್ಲಿ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯವನ್ನು
ಹೀಗೇ ನಗುತಿರಿ ಎಂದೆಂದೂ ನೈದಿಲೆಯ ನಗು ಚೆಲ್ಲಿ!

Tuesday, May 15, 2007

ಅಸ್ಪಷ್ಟತೆ..

ಓಡಲ ದನಿ ಕೇಳುವುದೇ ಹೊರಗಿನವರಿಗೆ?
ಹೊರಬಂದ ಮಾತದು ನಾಟುವುದೇ ಒಳಗವರಿಗೆ?
ಬೇಕೇ ಬೇಕು ಒಳ ಮನಸು ಅರ್ಥೈಸಲು
ಕೆಲವು ಮಾರ್ಮಿಕ ನುಡಿಗಳ ಸಾಲು


ಅಸ್ಪಷ್ಟ ರೇಖೆಗಳ ನಡುವೆ ಊಹಿಸುವ
ಸಮನಾಂತರ ಬದುಕೆಂಬುದೇ ಒಂದು ಅಸಾಧ್ಯ ಕಲ್ಪನೆಯಲ್ಲವೇ?
ಸಮರಸದಿಂದಿರಲು ಬೇಕೇ ಬೇಕು
ಪರಸ್ಪರ ನಂಬಿಕೆಗಳ ಸರಕು


ಇನ್ನೆಷ್ಟು ದಿನ ವಿರಬಹುದು ನಾವು ಈ ಜಗದಲಿ?
ಸೂರ್ಯ ಶಾಶ್ವತವಾಗಿ ಮರೆಯಾಗುವವರೆಗೂ..?
ಚಂದ್ರ ಪೂರ್ಣವಾಗಿ ಕರಗುವವರೆಗೂ...?
ಮರೆಮಾಚದೆ ಒಪ್ಪೋಣ ನಮ್ಮೆಲ್ಲರ ಆಟ
ಯಕಶ್ಚಿತ್ ನಾಲ್ಕು ದಿನಗಳ ಜೂಜಾಟ

ವಿಚಿತ್ರ ಸೋಗಿನಲ್ಲಿ ಬಾಳುವುದು ಅಪಕ್ವತೆಯ ಲಕ್ಷಣ
ಖಚಿತವಾಗಿ ಹೇಳಲಾಗದು ಅದೆಷ್ಟು ದಿನ ಸಾಗೀತು ಸುಳ್ಳುಗಳ ನಿರಾತಂಕ ಪಯಣ
ಕೊನಯುಂಟು ಪ್ರತಿದಿನದ ಮಿಥ್ಯ ನಿರೀಕ್ಷೆಗಳಿಗೆ
ಮೀಸಲಿರಲಿ ಕೆಲವು ಘಂಟೆಗಳು ಸತ್ಯವಾದ ಸಮೀಕ್ಷೆ ಗಳಿಗೆ

ಇರುವಷ್ಟು ದಿನದಲಿ ನೆಡಬಾರದೇಕೆ
ಪ್ರೀತಿ ವಿಶ್ವಾಸಗಳ ಪುಟ್ಟ ಪುಟ್ಟ ಗಿಡಗಳ
ಅದೇ ಗಿಡಗಳು ನಾಳೆ ಕಾಣಲಾರವೇ ನಂಬಿಕೆಯ ಮೊಳಕೆ
ಎಲೆಗಳ ಮಧ್ಯೆ ಟಿಸಿ ಲೊಡೆಯುವ ಆಶಾವಾದದ ಕುಡಿ
ಆಗಲಿದೆ ಬದುಕ ಹಸನುಗೊಳಿಸುವ ನಿರ್ಮಲ ಗುಡಿ

ಅವಿತು ಕುಳಿತ ಕವಿತೆ

ಅವಿತು ಕುಳಿತಿರುವ ಕವಿತೆ
ಒಮ್ಮೆ ಬಂದುಬಿಡು ನನ್ನ ಭಾವನೆಗಳೊಡನೆ ಬೆರೆತು
ಚಡಪಡಿಸಿದೆ ಈ ಮನಸು ಬರೆಯಲು ಹೊಸ ಚರಿತೆ


ಈಗಾಗಲೆ ಸಾಗಿವೆ ಹಲವು ದಿನಗಳು
ಮೂಡದೇ ಸ್ಪಷ್ಟ ಸಾಲುಗಳು
ಸೋತಿದೆ ಮನ ಬರೆಯಲಾರದೆ ಕವನ
ಮೂಡಿಬಿಡು ಒಮ್ಮೆ ತಡಮಾಡದೆ ಈ ದಿನ

ಸಾಗರ ಸಂಗಮಕೆ ನದಿಯೊಂದು ಓಡುವಂತೆ
ಕೆಚ್ಚಲು ಕಚ್ಚಿ ಕ್ಷೀರವ ಹೀರಲು ಕರು ನುಗ್ಗುವಂತೆ
ಪೂರ್ಣ ಚಂದ್ರನ ಕಾಣಲು ನೈದಿಲೆ ಅರಳುವಂತೆ
ಈ ಮನಕೆ ಓಡಿ, ನುಗ್ಗಿ, ಅರಳು ಓ ಕವಿತೆ...

ತೋಚಿದ್ದು ಗೀಚಿರುವೆ!

ಮನದಲ್ಲಿ ಚಿಗುರೊಡೆದಿದ್ದ
ಕನಸು ಚಿವುಟಿಹೋಗಿದೆ
ಮತ್ತೆ ಎಂದಿಗೂ ಅರಳದ
ಬಾಡಿಹೋದ ಬಳ್ಳಿಯ ಹಾಗೆ


ಬಾಳ ಹಲವು ಕವಲು ದಾರಿಗಳಲ್ಲಿ ಸಾಗಿದೆ ಓಟ
ಕಮರಿಹೋದ ಕನಸುಗಳ ಹುಡುಕಾಟ
ಅವುಗಳನರಸಿ ಮತ್ತೆ ನನಸಾಗಿಸಿಕೊಳ್ಳುವ ಹಠ


ಬೇಕಿದೆ ಒಂದು ಮಿಡಿಯುವ ಜೀವ
ನಮ್ಮ ಕಷ್ಟಗಳಿಗೆ ನೆರವಾಗುವಂತ ಭಾವ
ತುಂಬಲು ಸತ್ತು ಹೋದ ಬಯಕೆಗಳಿಗೆ ಹೊಸ ಪ್ರಭಾವ


ಹೊರಹಾಕಲು ಈ ಚಿಂತೆಗಳ ರಾಶಿಯನ್ನ
ಬರೆದುಬಿಡೋಣ ರಾಶಿ ರಾಶಿ ಕವನಗಳನ್ನ
ಶಾರದೆ ಒಲಿಯುವವರೆಗೂ ತೋಚಿದ್ದು ಗೀಚೋಣ!

Thursday, April 19, 2007

ಅವಿರತ ಪ್ರಯತ್ನ

ಕವನ ಬರೆಯುವ ಯಾವುದೇ ಉದ್ದೇಶವಿರಲಿಲ್ಲ.... ಹೇಗೋ ಏನೋ...ತೋಚಿದ್ದನೆಲ್ಲ ಗೀಚುತ್ತಿದ್ದೇನೆ...