Thursday, May 31, 2007

ಪಾರ್ಕಿನ ಮೆಲುಕು

ಒಂದು ದಿನ ಹೀಗೇ ನನ್ನ ಕಾಲಹರಣ ಆ ಪಾರ್ಕಿನಲ್ಲಿ ನಡೆದಿತ್ತು
ಎಷ್ಟೋ ವಿಚಿತ್ರ ಮುಖಗಳ ದರ್ಶನವಾಗುವುದು ಅಲ್ಲಿ ಸಾಮಾನ್ಯವೂ ಆಗಿತ್ತು
ಪ್ರತಿ ಯೊಂದು ಮುಖಗಳಲ್ಲೂ ಒಂದಲ್ಲಾ ಒಂದು ನೋವು ಬೇಗುದಿಗಳ ಸರಮಾಲೆ
ಒಬ್ಬನ ಮುಖದಲ್ಲಿ ದುಖದ ಕಟ್ಟೆ ಒಡೆದಂತಹ ಕಣ್ಣೀರು
ಮತ್ತೊಬ್ಬನ ಕಂಗಳಲ್ಲಿ ಭವಿಷ್ಯದ ಆಸೆಯೆ ಇಲ್ಲ ದಂತಹ ನಿರ್ಲಿಪ್ತತೆ


ಆಗೋ ಅಲ್ಲಿ ಹುಡುಗಿಯೊಬ್ಬಳ ಮುಗಿಯದ ಸುತ್ತಾಟ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ...
ಯಾರಿಗೋ ಕಾಯುತಿರಬೇಕೆಂದುಕೊಂಡೆ
ನನ್ನ ಗ್ರಹಿಕೆ ಸುಳ್ಳಾಗಲಿಲ್ಲ
ಅಲ್ಲೊಬ್ಬ ಬಂದೆ ಬಿಟ್ಟ ಅವಳ ಬಳಿ ಕೈಯಲ್ಲೊಂದು ಕೆಂಪು ಗುಲಾಬಿಯ ಹಿಡಿದು!
ಅಂದು ಪ್ರೇಮಿಗಳಿಬ್ಬರ ಮೊದಲ ಅಧಿಕೃತ ದಿನ ಆರಂಭ ವಾಗಿತ್ತು


ನನ್ನ ಪಕ್ಕದ ಕುರ್ಚಿಯಲ್ಲಿದ್ದವ ಇವರಿಬ್ಬರನ್ನು ಗಮನಿಸುತಿದ್ದನೇನೋ!
ಒಬ್ಬನೇ ಗೊಣಗಿಕೊಂಡ "ಹ್ಹಿ ಹ್ಹಿ ಹ್ಹಿ ಇಬ್ಬರಿಗೂ ಮಾಡಲು ಕೆಲ್ಸಾ ಇಲ್ಲ"
"ಇವತ್ತು ಹೀಗೇ ನಾಳೆ ಮತ್ಯಾಗೋ"
ಪ್ರಾಯಶಃ ಭಗ್ನ ಪ್ರೇಮಿ ಇರಬೇಕೆಂದು ಸುಮ್ಮನಾದೆ


ನನ್ನ ಹಾಗೆ ಕೆಲಸವಿಲ್ಲದೇ ಕಾಲಹರಣ ಮಾಡುವ ಸೋಮಾರಿಗಳು
ಇಂತಹ ಅಮರ (?) ಪ್ರೇಮಿಗಳ ಸಮ್ಮಿಲನ
ಎಷ್ಟೋ ಮುಗ್ಧ ಜನರ ನೋವಿನ ಆಕ್ರಂದನ
ಮಕ್ಕಳನ್ನು ಆಡಿಸಲು ಬರುವ ತಾಯಂದಿರು
ಇಳಿ ವಯಸ್ಸಿನಲ್ಲೂ ವ್ಯಾಯಾಮದ ನೆಪ ಹೇಳಿ
ಹೆಂಗಸರನ್ನು ನೋಡಲು ಬರುವ ಚಪಲ ಚನ್ನಿಗರಾಯರ ವರಸೆ
ಇಲ್ಲಿ ಇಂದಿನ ಪ್ರತಿದಿನದ ವಿಶೇಷಗಳು!


ಇವಿಷ್ಟೆಲ್ಲದರ ಮಧ್ಯೆಯೂ ನನ್ನ ಬಾಲ್ಯದಲ್ಲಿ ನಾನಂದು
ಕಂಡಿದ್ದ ವೈಶಿಷ್ಟ್ಯಗಳೆ ಬೇರೆಯಾಗಿತ್ತು
ಅವು ಸಿವಿ ನೆನಪಿನ ಬುತ್ತಿಗಳು
ಬೆಳ್ಳಂ ಬೆಳಿಗ್ಗೆ ಇಲ್ಲಿ ನೆರೆಯುತಿದ್ದರು ನಮ್ಮ ನಾಡಿನ ಖ್ಯಾತ ಸಾಹಿತಿಗಳು
ಒಬ್ಬೊಬ್ಬರದೂ ವಿಶಿಷ್ಟ ವ್ಯಕ್ತಿತ್ವದ ಮಾಸದ ಗುರುತುಗಳು
ಪ್ರತಿ ದಿನವೂ ಸಾಹಿತ್ಯದ ಬಗ್ಗೆ ಚರ್ಚೆ ದೇಶದ ಬಗ್ಗೆ ಮಾತುಕತೆ
ಇವರೆಲ್ಲರ ಮಾತುಗಳನ್ನು ನಾನು ಕದ್ದು ಕೇಳುತಿದ್ದೆ ಮರೆಯಲ್ಲಿ
ಇಂಥ ಸುಂದರ ನೆನಪುಗಳ ನಾನು ಹೇಗೆ ಮರೆಯಲಿಸಿಗುವುದೇ ನನಗೆ ಅಂಥ ಮತ್ತೊಂದು ಕಾಲ?
ಈ ಪಾರ್ಕಿನಲ್ಲಿ ಈಗಲೂ ಇದೆ ಸ್ನಿಗ್ಧ ಸೌಂದರ್ಯ
ಅಂದಿದ್ದ ಬೃಹತ್ ಮರಗಳ ಕೊರಗನ್ನು ಅಂದಿನ ಚಿಕ್ಕ ಮರಗಳು ಈಗ ನೀಗಿಸಿವೆ
ಎಂಥವರನ್ನು ನಿಬ್ಬೆರಗಾಗಿಸುವಂತೆ ಬೃಹದಾಕಾರವಾಗಿ ಬೆಳೆದಿದೆ
ಈಗಲೂ ಇದ್ದಾರೆ ಸಾಹಿತಿಗಳು ಆದರೆ ಅವರಿಗೆಲ್ಲ ಇಲ್ಲ ಅಂದಿದ್ದ ಸಾಹಿತಿಗಳ ಖದರು
ಎಲ್ಲಾ ಇದ್ದು ಏನೋ ಕಳೆದುಕೊಂಡಂತಹ ಸ್ಥಿತಿ ನಮ್ಮಂಥವರದು!


ಅಂದಿನ ಒಂದು ಜನಾಂಗವೇ ಮರೆಯಾಗಿದೆ
ಇಂದಿನ ಜನಾಂಗದಲ್ಲಿ ನಾನು ಇನ್ನೂ ಇದ್ದೇನೆ
ಕೆಲಸವಿಲ್ಲದೇ ಹರಟುವ ಹರುಕು ಬಾಯಿ ದಾಸನಾಗಿ
ಹಿಂದಿನ ದಿನಗಳ ಮೆಲುಕು ಹಾಕಲು ಕೊಡುವೆ ಪ್ರತಿದಿನ ಭೇಟಿ ಇಲ್ಲಿ


ಮತ್ತೆಷ್ಟು ದಿನ ನನ್ನ ಈ ಅವತಾರ?

ಒಂದು ದಿನ ನಾ ಕೂಡ ಒಂದು ನೆನಪಾಗಬಹುದು
ಇವೆಲ್ಲಕ್ಕೂ ಮೂಕ ಸಾಕ್ಷಿಯಾಗಿ ಹರಡಿದೆ ಈ ಪಾರ್ಕು ಸುತ್ತಾ ಮುತ್ತಾ

ಮತ್ತೆ ಸಾಗಿವೆ, ಸಾಗಲಿವೆ
ಇಂದು ಮತ್ತದೇ ಸತ್ವವಿಲ್ಲದ ಸಂಗತಿಗಳು ಅತ್ತ ಇತ್ತ!

Monday, May 28, 2007

ಪ್ರೀತಿಯ ಆಳ

ಅನಿಶ್ಚಿತತೆಯ ಕಾಲದಲ್ಲೂ
ನಿಶ್ಚಿಂತೆಯಿಂದ ಉಸಿರಾಡುವ ವಿಶ್ವಾಸವಿದೆ
ಭಗ್ನಗೊಂಡ ಭವಿಷ್ಯದಲ್ಲೂ
ಮಗ್ನನಾಗಿ ನಿನ್ನ ಪ್ರೀತಿಸುವ ತವಕವಿದೆ


ಆಗಲೇಬೇಕಾದ್ದೆಲ್ಲ ಆಗಿಬಿಡಲಿ
ಈ ಕ್ಷಣವೇ ಭೂಮಿ ಕಂಪಿಸಲಿ
ಸೃಷ್ಟಿಯ ಸರ್ವಸ್ವವೂ ನಾಶವಾದರಗಲಿ
ಅರೆ ಕ್ಷಣವಾದರೂ ನಿನ್ನೊಡನೆ ನಾನಿರುವ
ಅಲ್ಪ ಕಾಲವು ಶಾಶ್ವತ ಚೇತನವಾಗಲಿ

Monday, May 21, 2007

ರವಿ

ಮೂಡುವ ರವಿ ಮೂಡಣದಿ
ಬೆಳಕ ಬೀರಲು ಅರ್ಧ ಭೂಮಿಗೆ
ಮುಳುಗುವ ರವಿ ಪಡುವಣದಿ
ಇಲ್ಲಿ ಕತ್ತಲ ಹರಡಿ ಸಜ್ಜಾಗುವ ಬೆಳಕ ಸೂಸಲು ಇನ್ನರ್ಧದ ಇಳೆಗೆ


ದಣಿವಿಲ್ಲ ಅವನಿಗೆ ಖಂಡಿತ
ಭೇಧ ಮಾಡಲಾರ ಯಾರಿಗೂ ಕೊಡಲು ಬೆಳಕು
ಫಲ ಬೇಡದೇ ದುಡಿವನು ಅನವರತ
ಅವನ ಮನದಲ್ಲಿಲ್ಲ ಯಾವುದೇ ಹುಳುಕು


ಹುಟ್ಟುವಾಗ ಕೆಂಬಣ್ಣಡ ಜಳಕ
ಮುಳುಗುವಾಗಲೂ ಅದೇ ಸ್ನಾನದ ಪುಳಕ
ನೆತ್ತಿಯ ಮೇಲೆ ಬಂದಾಕ್ಷಣವೇ ತರುವ ಬಿಸಿ
ಸಂಜೆ ಹೊರಡುವ ವೇಳೆ ತೋರುವ ತಂಪು ಕನಿಕರ ಪೂಸಿ


ಇಡೀ ಬ್ರಹ್ಮಾಂಡವೇ ಹಾಕಬೇಕು ಪ್ರದಕ್ಷಿಣೆ ಇವನ ಸುತ್ತ
ತಾನು ಮಾತ್ರ ಜಗ್ಗಲಾರ ಅತ್ತ ಇತ್ತ
ತೋರುವ ವಿಶೇಷ ಪ್ರೀತಿ ಭೂಮಿಕೆಗೆ
ಕಾರಣ ನಾದ ಭೂಮಿಯ ಇಡೀ ಮನುಸಂಕುಲದ ಪ್ರಗತಿಗೆ


ನಮಗೆ ಕಾಣದ ದೇವರುಗಳು ಹಲವಾರು
ಕಾಣುವ ಪ್ರತ್ಯಕ್ಷ ದೈವವೇ ಸಾಟಿ ನಿನಗಾರು?
ಅವಿಶ್ರಾಂತ ದುಡಿಮೆಗೆ ಅರ್ಪಿಸಿಕೊಂಡ ಓ ಭಾಸ್ಕರ
ನಿನಗೆ ನಮ್ಮ ಕೋಟಿ ಕೋಟಿ ನಮಸ್ಕಾರ.

ಒಂದು ಜಿಜ್ಞಾಸೆ

ಲೇಖನಿಯಲಿ ಕವಿತೆಯಾಗಿ ಮೂಡಲು
ಹಿಂದೇಟಾಕುವ ನೀನು
ನಾ ಕುಂಚ ಹಿಡಿಯಲು ಚಿತ್ರವಾಗಿ ಉದ್ಭವಿಸಲು ಕಾರಣವೇನು?


ನಾನು ಒಬ್ಬ ಕೆಟ್ಟ ಕವಿಯೆಂಬ
ಸತ್ಯ ನಿನಗೂ ತಿಳಿದು ಹೋಯಿತೆ?
ಅಥವಾ ನಾನೊಬ್ಬ ಒಳ್ಳೆಯ
ಚಿತ್ರಕಾರನೆಂಬ ಭ್ರಮೆಯೇ?


ಬಿಳಿ ಹಾಳೆಯಲಿ ನಿನ್ನಂದವ
ವಿಶೇಷ ಪದಗಲ್ಲಿ ಹಿಡಿದಿಡುವ ಆಸೆ ಪಟ್ಟೆ
ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ
ನೋಡೋಣ ಚಿತ್ರವಾಗಿಯಾದರೂ ಮೂಡುವೆಯೇನೋ
ಎಂದು ಲೇಖನಿ ಪಕ್ಕಕ್ಕಿಟ್ಟೆ


ಹಿಂದೆಂದೋ ಅಭ್ಯಾಸವಿದ್ದ ಈಗ ಕೈಬಿಟ್ಟಿರುವ
ಕುಂಚವನ್ನು ಅದೇ ಬಿಳಿ ಹಾಳೆಯಲಿ
ಬಣ್ಣ ಬಣ್ಣದ ಮಿಶ್ರಣದಿ ಬಿಡಿಸಿದೆ ನಿನ್ನ ರೂಪವ
ಏನಾಶ್ಚರ್ಯ! ನಾನೆಣಿಸಿದಕ್ಕಿಂತ
ಅದ್ಭುತವಾಗಿ ಮೂಡಿ ಬಂದಿರುವೆ ನೀನು
ನಾನಂದು ಕಂಡಿದ್ದ ಅದೇ ರೂಪದಲ್ಲಿ


ಒಂದು ಮಾತಿದೆ - ನೂರು ಪದಗಳ
ಅಷ್ಟೂ ಅರ್ಥಗಳನ್ನು ಒಂದು ಚಿತ್ರವು
ಥಟ್ಟನೆ ಹೇಳಿಬಿಡುವುದಂತೆ
ಪದಗಳಿಗೆ ನಿಲುಕದ ಭಾವಗಳು
ಚಿತ್ರಗಳಲ್ಲೇ ನಿಲುಕುವುದಂತೆ!


ಹೇಗೋ ಏನೋ ನಾನಾಸೆ ಪಟ್ಟಂತೆ
ಕವಿತೆಯಾಗಲಿಲ್ಲ ನೀನು
ನಿನ್ನಾಸೆಯಂತೆ ನನ್ನ ಕುಂಚದಲ್ಲೇ ಉಳಿದುಬಿಟ್ಟೆ
ಆದರೆ ನನ್ನ ಜಿಜ್ಞಾಸೆ ಇನ್ನೂ ಮುಗಿದಿಲ್ಲ
ಲೇಖನಿ ಹಿಡಿಯಲೋ ಕುಂಚ ಹಿಡಿಯಲೋ ಎಂಬ ಚಿಂತೆಯಲಿ ಮುಳುಗಿಹೆನಲ್ಲ!

Thursday, May 17, 2007

ಪೇಚಾಟ

ವಿಚಿತ್ರ ಬಯಕೆಗಳ
ವಿಕ್ಷಿಪ್ತ ಸಾಗರದಲ್ಲಿ
ಮಿಂದೆದ್ದಂತಿದೆ ಮನಸು
ಸಹಸ್ರ ಕನವರಿಕೆಗಳಿಗೆ
ಸಾಕ್ಷಿಯಾಗಿ ಮೂಡಿದಂತಿದೆ
ಕಾಡುವ ಈ ಕನಸು


ಮನಸು ನೆನೆದಂತೆ
ತಪ್ಪದೇ ಕಾಣುವೆ
ಪ್ರತಿ ರಾತ್ರಿಯ ಕನಸು
ಕಾಣುವ ಕನಸೆಲ್ಲವೂ
ನಿಜವಾದರೆ ಅದೆಂಥ ಸೊಗಸು!


ಪ್ರತಿದಿನದ ಕಾಯಕವೇ ಬೇರೆ
ಮನಸು ಯಾಚಿಸುವುದೇ ಬೇರೆ
ತೃಪ್ತಿಯುಂಟೆ ಈ ಬದುಕಿಗೆ?
ಇಹ ಪರದ ಆಲೋಚನೆ ಬಿಟ್ಟು
ನಮ್ಮಷ್ಟಕ್ಕೆ ನಾವಿದ್ದರೆ ಸಾಕೆ?


ಎಲ್ಲೋ ಕೇಳಿದ ನೆನಪು
ಆಸೆಯೆ ದುಖಕೆ ಮೂಲ
ಎಲ್ಲೋ ಓದಿದ ನೆನಪು
ಆಸೆಯೆ ಇಲ್ಲದಿರೆ ಅದು ಜೀವನವೇ ಅಲ್ಲ!


ಒಡಲಾಳದ ಬೇಗುದಿ ಆರಲು
ಚಿಮ್ಮ ಬೇಕಿದೆ ನೆಮ್ಮದಿಯ ಕಾರಂಜಿ
ಮನದ ದುಗುಡ ದೂಡಲು
ಅರಳಬೇಕಿದೆ ಅಭಯದ ಅಪರಂಜಿ


ಎಷ್ಟೆಲ್ಲಾ ಪೇಚಾಟಗಳ ಮಧ್ಯೆ
ಒಳಮನಸು ಹೇಳುವ ಬುದ್ಧಿಯೇ ಬೇರೆ
'ಇಂದು ಉದುರಿಹೋದ ಹಣ್ಣೆಲೆ ಜಾಗದಿ
ಚಿಗುರಲಾರದೇ ಮತ್ತೆ ನಳನಳಿಸುವ ಚಿಗುರೆಲೆ?
ಕಾಯುತಿರು ನಿನ್ನ ದಿನ ಬರುವ ವೇಳೆ..'

ಲಿಲ್ಲಿ

ಪ್ರತಿಯೊಬ್ಬರ ಮಾನಸ ಸರೋವರದಲ್ಲಿ
ಮೂಡುವ ನೈದಿಲೆ ಯಂತೆ ಇರುವರು ಲಿಲ್ಲಿ
ಎಂದೆಂದೂ ಇರುವರು ನೆನೆದವರ ಮನದಲ್ಲಿ


ಈ ಹಿಂದೆ ಸಾವಿರಾರು ವಿದ್ಯಾರ್ಥಿ ಗಳಿಗೆ ಕಲಿಸಿದರು ವಿದ್ಯೆ
ಈಗ ಈ ತಾಣದಲ್ಲಿ ಕಲಿಸುತಿಹರು ಎಲ್ಲರಿಗೂ
ಬದುಕುವ ವಿದ್ಯೆ ಇದ್ದುಕೊಂಡು ನಮ್ಮೆಲ್ಲರ ಮಧ್ಯೆ


ಇದ್ದರೂ ಸಾಗರದಾಚೆಯ ದೂರದ ನಾಡಿನಲ್ಲಿ
ಇವರ ಮನಸ್ಸೆಂದೆಂದೂ ಇರುವುದು ಈ ಗಂಧದನಾಡಿನಲ್ಲಿ
ತಾವು ಎಲ್ಲೇ ಇದ್ದರೂ ಅವರ ಹೃದಯ ಮಿಡಿವುದು ತವರಿನಲ್ಲಿ
ಶರೀರ ಅಲ್ಲಿದ್ದರೂ ಅವರ ಶಾರೀರ ಪ್ರತಿಧ್ವನಿಸುವುದು ಕನ್ನಡಿಗರು ತಾಣದಲ್ಲಿ

ಇಗೋ ನಾವೆಲ್ಲಾ ಕೋರುತಿರುವೆವು ಲಿಲ್ಲಿ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯವನ್ನು
ಹೀಗೇ ನಗುತಿರಿ ಎಂದೆಂದೂ ನೈದಿಲೆಯ ನಗು ಚೆಲ್ಲಿ!

Tuesday, May 15, 2007

ಅಸ್ಪಷ್ಟತೆ..

ಓಡಲ ದನಿ ಕೇಳುವುದೇ ಹೊರಗಿನವರಿಗೆ?
ಹೊರಬಂದ ಮಾತದು ನಾಟುವುದೇ ಒಳಗವರಿಗೆ?
ಬೇಕೇ ಬೇಕು ಒಳ ಮನಸು ಅರ್ಥೈಸಲು
ಕೆಲವು ಮಾರ್ಮಿಕ ನುಡಿಗಳ ಸಾಲು


ಅಸ್ಪಷ್ಟ ರೇಖೆಗಳ ನಡುವೆ ಊಹಿಸುವ
ಸಮನಾಂತರ ಬದುಕೆಂಬುದೇ ಒಂದು ಅಸಾಧ್ಯ ಕಲ್ಪನೆಯಲ್ಲವೇ?
ಸಮರಸದಿಂದಿರಲು ಬೇಕೇ ಬೇಕು
ಪರಸ್ಪರ ನಂಬಿಕೆಗಳ ಸರಕು


ಇನ್ನೆಷ್ಟು ದಿನ ವಿರಬಹುದು ನಾವು ಈ ಜಗದಲಿ?
ಸೂರ್ಯ ಶಾಶ್ವತವಾಗಿ ಮರೆಯಾಗುವವರೆಗೂ..?
ಚಂದ್ರ ಪೂರ್ಣವಾಗಿ ಕರಗುವವರೆಗೂ...?
ಮರೆಮಾಚದೆ ಒಪ್ಪೋಣ ನಮ್ಮೆಲ್ಲರ ಆಟ
ಯಕಶ್ಚಿತ್ ನಾಲ್ಕು ದಿನಗಳ ಜೂಜಾಟ

ವಿಚಿತ್ರ ಸೋಗಿನಲ್ಲಿ ಬಾಳುವುದು ಅಪಕ್ವತೆಯ ಲಕ್ಷಣ
ಖಚಿತವಾಗಿ ಹೇಳಲಾಗದು ಅದೆಷ್ಟು ದಿನ ಸಾಗೀತು ಸುಳ್ಳುಗಳ ನಿರಾತಂಕ ಪಯಣ
ಕೊನಯುಂಟು ಪ್ರತಿದಿನದ ಮಿಥ್ಯ ನಿರೀಕ್ಷೆಗಳಿಗೆ
ಮೀಸಲಿರಲಿ ಕೆಲವು ಘಂಟೆಗಳು ಸತ್ಯವಾದ ಸಮೀಕ್ಷೆ ಗಳಿಗೆ

ಇರುವಷ್ಟು ದಿನದಲಿ ನೆಡಬಾರದೇಕೆ
ಪ್ರೀತಿ ವಿಶ್ವಾಸಗಳ ಪುಟ್ಟ ಪುಟ್ಟ ಗಿಡಗಳ
ಅದೇ ಗಿಡಗಳು ನಾಳೆ ಕಾಣಲಾರವೇ ನಂಬಿಕೆಯ ಮೊಳಕೆ
ಎಲೆಗಳ ಮಧ್ಯೆ ಟಿಸಿ ಲೊಡೆಯುವ ಆಶಾವಾದದ ಕುಡಿ
ಆಗಲಿದೆ ಬದುಕ ಹಸನುಗೊಳಿಸುವ ನಿರ್ಮಲ ಗುಡಿ

ಅವಿತು ಕುಳಿತ ಕವಿತೆ

ಅವಿತು ಕುಳಿತಿರುವ ಕವಿತೆ
ಒಮ್ಮೆ ಬಂದುಬಿಡು ನನ್ನ ಭಾವನೆಗಳೊಡನೆ ಬೆರೆತು
ಚಡಪಡಿಸಿದೆ ಈ ಮನಸು ಬರೆಯಲು ಹೊಸ ಚರಿತೆ


ಈಗಾಗಲೆ ಸಾಗಿವೆ ಹಲವು ದಿನಗಳು
ಮೂಡದೇ ಸ್ಪಷ್ಟ ಸಾಲುಗಳು
ಸೋತಿದೆ ಮನ ಬರೆಯಲಾರದೆ ಕವನ
ಮೂಡಿಬಿಡು ಒಮ್ಮೆ ತಡಮಾಡದೆ ಈ ದಿನ

ಸಾಗರ ಸಂಗಮಕೆ ನದಿಯೊಂದು ಓಡುವಂತೆ
ಕೆಚ್ಚಲು ಕಚ್ಚಿ ಕ್ಷೀರವ ಹೀರಲು ಕರು ನುಗ್ಗುವಂತೆ
ಪೂರ್ಣ ಚಂದ್ರನ ಕಾಣಲು ನೈದಿಲೆ ಅರಳುವಂತೆ
ಈ ಮನಕೆ ಓಡಿ, ನುಗ್ಗಿ, ಅರಳು ಓ ಕವಿತೆ...

ತೋಚಿದ್ದು ಗೀಚಿರುವೆ!

ಮನದಲ್ಲಿ ಚಿಗುರೊಡೆದಿದ್ದ
ಕನಸು ಚಿವುಟಿಹೋಗಿದೆ
ಮತ್ತೆ ಎಂದಿಗೂ ಅರಳದ
ಬಾಡಿಹೋದ ಬಳ್ಳಿಯ ಹಾಗೆ


ಬಾಳ ಹಲವು ಕವಲು ದಾರಿಗಳಲ್ಲಿ ಸಾಗಿದೆ ಓಟ
ಕಮರಿಹೋದ ಕನಸುಗಳ ಹುಡುಕಾಟ
ಅವುಗಳನರಸಿ ಮತ್ತೆ ನನಸಾಗಿಸಿಕೊಳ್ಳುವ ಹಠ


ಬೇಕಿದೆ ಒಂದು ಮಿಡಿಯುವ ಜೀವ
ನಮ್ಮ ಕಷ್ಟಗಳಿಗೆ ನೆರವಾಗುವಂತ ಭಾವ
ತುಂಬಲು ಸತ್ತು ಹೋದ ಬಯಕೆಗಳಿಗೆ ಹೊಸ ಪ್ರಭಾವ


ಹೊರಹಾಕಲು ಈ ಚಿಂತೆಗಳ ರಾಶಿಯನ್ನ
ಬರೆದುಬಿಡೋಣ ರಾಶಿ ರಾಶಿ ಕವನಗಳನ್ನ
ಶಾರದೆ ಒಲಿಯುವವರೆಗೂ ತೋಚಿದ್ದು ಗೀಚೋಣ!