Monday, September 10, 2007

HB

ಎಂದಿಗೂ ಇರಿ
ಚೈತನ್ಯದ ಚಿಲುಮೆಯಾಗಿ
ಮೌನದಾಚೆಯ ಹೊಸ ಮಾತಾಗಿ
ಭಾವ ಬಿಂದುವಿನ ಅರ್ಥವಾಗಿ

ಬದುಕು ಹಸಿರಾಗಲಿ
ಸ್ನೇಹ ಬನದ ಬಯಲಲಿ
ಹೊಸ ಮನ್ವಂತರದ ಹೆಸರಲಿ
ಭವ್ಯ ಭವಿಷ್ಯದ ಉಸಿರಲಿ

ಕೂಡಿಟ್ಟ ಕನಸುಗಳು ನನಸಾಗಲಿ
ಬಾಳಿನ ಪಯಣದಲಿ
ಪಯಣದ ಪ್ರತಿ ಘಳಿಗೆ ಸಿಹಿಯಾಗಿರಲಿ
ಸಿಹಿ ಭರಿತ ಚೈತ್ರಗಳು ನಿಮ್ಮದಾಗಲಿ

Tuesday, September 04, 2007

ದ್ವಂದ್ವ

ಅದ್ಭುತವಲ್ಲ ಕಾಲತ್ಮಕತೆಯೂ ಅಲ್ಲ
ಏನೋ ಎಳೆ ಅದು
ಸಿಕ್ಕಂತೆ ಗೀಚಿದ್ಡಾಯಿತು
ಅರ್ಥವಿಲ್ಲದ ಗೆರೆಗಳಿಗೆ
ಜನರಿಟ್ಟ ಹೆಸರು ಮಹಾ ಕಲಾಕೃತಿ!


ಸತ್ವವಿಲ್ಲದ ತತ್ವಗಳು ಇಲ್ಲಿವೆ
ನನಗೇ ಅರ್ಥವಾಗದ
ಪದಗಳ ಲಾಸ್ಯವೂ ತುಂಬಿವೆ
ನಾ ಕಂಡ ಅತಿ ಸಾಮಾನ್ಯ
ಜೀವನ ಗಾಥೆಯ ಪದ ಜೋಡಣೆ
ಓದಿದವರಿಗೆ ಅನಿಸಿತಂತೆ ಅಭೂತಪೂರ್ವ ಕವನ!

ವಿಪ್ಲವ ಭಾವ

ರುಚಿಸುತಿಲ್ಲ
ನೀಲಾಕಾಶದ ದೈತ್ಯತೆ
ಹಕ್ಕಿಗಳ ನಿನಾದ
ಎಳೆ ಬಿಸಿಲ ಚೆಲ್ಲಾ ಟ
ಹೊಂಬಿಸಿಲ ಸ್ಪರ್ಶಕೆ
ನರ್ತಿಸುವಂತಿರುವ
ಹರಿವ ನೀರ ಕಲರವ

ಸ್ತಬ್ದ ಮೌನವಿದೆ
ನೀ ಮೃದು ಹೆಜ್ಜೆಗುರುತು
ಇಟ್ಟು ಹೋದ ಮನಸಿನಲಿ
ನೆನಪಧಾರೆ ಚೆಲ್ಲಿ
ಹೋದ ಮನೆಯಲಿ
ಬೆಂಬಿಡದೇ ನಿನ್ನಗಲಿಕೆಯ
ನೋವುಂಡು ಬೇಯುತಿರುವ ಬಾಳಲ್ಲಿ

ಒಡಲಾಳದಲ್ಲಿ
ಇನ್ನೂ ಉರಿಯುತಿದೆ
ಮತ್ತೆ ನಿನ್ನ ಬರುವಿಕೆಯ ಸಾರುವ
ದಿವ್ಯ ಪ್ರಣತಿ
ಬಿರುಗಾಳಿಗೂ ನಂದದೆ
ನಕ್ಕು ಹೇಳುವಂತಿದೆ
ಆಶಾಕಿರಣ ವಿರಲು ಇರು ಎದೆಗುಂದದೆ

ಹೇಳಿ ಕಳಿಸಿರುವೆ
ನೀಲಾಕಾಶದಲ್ಲಿ ಜೂಟಾಟವಾಡುವ
ಮುಗ್ಧ ಮೇಘ ಗಳಿಗೆ
ಈಗ ತಾನೇ ಉದಯಿಸಿ
ಎಳೆ ಬಿಸಿಲ ಸೂಸುತಿರುವ ರವಿಗೆ
ಪರಿಧಿ ಇಲ್ಲದೇ ಸಾಗುವ ಹಕ್ಕಿಗಳಿಗೆ
ತಡೆ ಇಲ್ಲದೇ ಹರಿವ ನೀರಿಗೆ
ನಿನ್ನ ಹುಡುಕಲು
ಬಸಿದಿಟ್ಟ ಭಾವನೆಗಳ ತಿಳಿಸಿ
ಮತ್ತೆ ನನ್ನೆಡೆಗೆ ಬರ ಹೇಳಲು

ಆದರೂ ಯಾಕೋ ದುಗುಡವಿದೆ
ಮೇಘಗಳು ಹಾದಿ ತಪ್ಪುವ ಅಪಾಯ
ಹಕ್ಕಿಗಳು ನನ್ನ ಮಾತ ಉಪೇಕ್ಷಿಸುವ ಸಂಶಯ
ರವಿಗೆ ಪುರುಸೊತ್ತಿಲ್ಲವೇನೋ...!
ಹರಿವ ನೀರು ನಿನ್ನ ಅರಸುವಲ್ಲಿ
ಸೋಲ ಬಹುದೇನೋ...!

ಮಂಗಳ ಹಾಡಿ
ಹುಚ್ಚು ಕುದುರೆಯಂತೆ ಓಡುವ
ಈ ಕೆಟ್ಟ ಆಲೋಚನೆಗಳಿಗೆ
ನನ್ನ ಈ ಸ್ನೇಹಿತರ ಜೊತೆಗೂಡಿ
ಬದುಕನ್ನು ಹಸನು ಗೊಳಿಸು ಬಾ ಗೆಳತಿ