Tuesday, December 16, 2008

ಸರಿತೆ

ಸೊಗಸಾದ ಕಲ್ಪನೆಯಾದೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ

ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ

Wednesday, October 01, 2008

ಕಾಗದದ ದೋಣಿ

ಕಾಗದದ ದೋಣಿ ಇದು ...
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು


ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು


ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು


ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ

Monday, June 02, 2008

ನೀ ನನ್ನ ಪಾಲಿಗೆ

ಈ ಹೃದಯ ಪಿಸುಗುಟ್ಟಲು
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು

ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು

ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ

ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ

ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ

ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ

Tuesday, April 22, 2008

ಹಕ್ಕಿಯ ಗೂಡು

ಹಕ್ಕಿಯ ಗೂಡು
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ


ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ


ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ


ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ

Saturday, March 29, 2008

ನಗು

ಸಿಗಬಹುದು ಚಿಂತೆಯ

ಸಂತೆಯಲ್ಲೂ ನಗುವೆಂಬ

ಗುಳಿಗೆ

ದೂರವಿಲ್ಲ ಆ ನಗುವು

ನಮ್ಮದಾಗುವ

ಘಳಿಗೆ



ಹಣ್ಣೆಲೆ ಉದುರಿದ ಮೇಲೆ

ಚಿಗುರದೆ ಇರದು

ಚಿಗುರೆಲೆ

ದುಗುಡ ದೂರವಿಟ್ಟು

ಮತ್ತೆ ನಗುವ

ಈಗಲೇ

.

ನಕ್ಕು ನಗಿಸಿ

ನಗುವವರ ಮುಖದಲಿ

ನಗುವಾಗುವ

ಮರೆಯಿಸೆ ದುಃಖ

ಮನತಣಿಸುವ

ಹಾಡಾಗುವ

Sunday, March 23, 2008

ಹೀಗೊಂದು ನೋವು

ನಿನಗೆ ......
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...


ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....


ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...


ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...


ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...


ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....











Saturday, March 01, 2008

ನಾನು-ನೀನು

ನೆನಪಿನ ಪುಟದ

ಬಿಳಿ ಹಾಳೆಯಲ್ಲಿ

ಹೊಸ ಚಿತ್ರ ನೀನು

ಹಳೆಯ ಬಣ್ಣ ನಾನು


ದೂರದಾಚೆಯ ಕಾನನದ

ಮಡಿಲಲ್ಲಿ

ನಿತ್ಯ ಹಸಿರು ನಿನ್ನದು

ಅಲ್ಲಿರುವ ಉಸಿರು ನನ್ನದು

.
ಸವಿ ಜೇನ ಕೊಳದ

ನಡುವಿನಲ್ಲಿ

ಅರಳಿದ ನೈದಿಲೆ ನಿನ್ನ ಕಂಗಳು

ನಾನು ಅರಳಿಸುವ ಬೆಳದಿಂಗಳು

.

ಕನಸಿನ ಲೋಕದ

ಹೂದೋಟದಲ್ಲಿ

ಕೆಂಪು ಗುಲಾಬಿಯು ನಿನ್ನಧರ

ನಾನದರ ಭ್ರಮರ

Wednesday, February 06, 2008

Unknown Feeling!

Saw it
Ignored it
Did not realize
What is it..!


No loss
No gain
Left over
Is just pain


Fractured mind
Is complete blind
Waiting for
A path of kind

Thursday, January 17, 2008

ಒಲವು

ಭಕ್ತಿಯ ಅಲೆ
ಮುಕ್ತಿಯ ತೀರಕೆ
ಪ್ರೀತಿಯ ಕಲೆ
ನಲ್ಮೆಯ ಜೀವಕೆ


ಜೇನ ನದಿಯಲ್ಲಿ
ಒಲುಮೆಯ ನೌಕೆ
ಮೀನ ಹೆಜ್ಜೆಯಲಿ
ಮನದಾಳದ ಬಯಕೆ


ಆಸೆಗಳೇ ಬಸಿರಾಗಿ
ಭಾವಗಳೇ ಉಸಿರಾಗಿ
ನೆನಪಾದವು ಹಸಿರು
ಒಲವು ಅದರ ಹೆಸರು