Tuesday, December 15, 2009

ಹಾಡು ನನ್ನ ಚರಮ ಗೀತೆ..

ಈ ಜೀವ ದೇಹದಿಂದ ಹಾರಲು
ಆತ್ಮ ಚಿತೆಯಿಂದ ಹೊರಡಲು
ನಾಚುವಂತೆ..
ನನ್ನದೇ ಕವಿತೆ..
ಹಾಡು ನನ್ನ ಚರಮ ಗೀತೆ..

ತಣಿಯಲಿ ಈ ಆತ್ಮ
ಕುಣಿಯಲಿ ಎನ್ನ ಚೇತನ..
ಹರಿಯುವಂತೆ...
ಸುಪ್ತ ಸರಿತೆ..
ಹಾಡು ನನ್ನ ಚರಮ ಗೀತೆ...

ಬದುಕಿಗೆ ಅರ್ಥ ಬರುವಂತೆ ...
ಕೆದಕಿದ ನೋವು ಸುಡುವಂತೆ..
ಮೂಡುವಂತೆ..
ಹೊಸ ಚರಿತೆ...
ಹಾಡು ನನ್ನ ಚರಮ ಗೀತೆ..

ಅಂತರಾತ್ಮ ಅರಿವಂತೆ..
ತಪ್ತ ಭಾವದ ಕುರಿತಂತೆ..
ಈ ಬಾಳ ಜಂಜಾಟದ...
ಒಗಟು ಬಿಡಿಸುವಂತೆ..
ಹಾಡು ನನ್ನ ಚರಮ ಗೀತೆ....

ಈ ಆತ್ಮ ಜನ್ಮ ತಳೆವಂತೆ...
ಮತ್ತೆ ಎಲ್ಲೋ ಹುಟ್ಟಿ ಬೆಳೆವಂತೆ..
ಹರಸಿ ಕೂಗು ....
ಮತ್ತೆ ಮತ್ತೆ....
ಹಾಡು ನನ್ನ ಚರಮ ಗೀತೆ..!

Tuesday, November 03, 2009

ನೀ ನನಗೆ ... ನಾ ನಿನಗೆ...

ನಿನ್ನೊಳಗೆ ನಾನಾಗಿ
ನನ್ನ ನಾ ನಿನಗಾಗಿ
ನೀಡಿ
ನಿನ್ನಲ್ಲೇ ನರ್ತಿಸುವೆ
ನಿನ್ನೋಲವೇ ನಾನಾಗುವೆ
ನನದೇನು..?
ನನಗಿರುವುದೇನು...?
ನೀನೆ ನನ್ನ ನಲಿವು ...
ನೀನೆ ನನ್ನ ನಗುವು...
ನಿನಗಾಗಿ ನಾನು
ನನಗಾಗಿ ನೀನು
ನನ್ನೆದೆಯಲ್ಲಿ ನೀ ನೇಗಿಲು
ನಿನ್ನೆದೆಯಲ್ಲಿ ನಾ ನೆರಳು
ನಾನು ನೀಲಾಕಾಶ
ನೀನಲ್ಲಿರೋ ನಕ್ಷತ್ರ
ನಾ ನಿನಗೆ ನಕ್ಷೆ..
ನೀ ನನಗೆ ನಿರೀಕ್ಷೆ ...

Thursday, October 29, 2009

ಅವಳ ಹೆಸರು

ಅಗ್ನಿಯೂ ಸುಟ್ಟುಹೋಗುವ ಕೋಪ
ಧರಿತ್ರಿಗೂ ಮೀರಿದ ಮೌನ
ಕೊಂಡು ತಂದವಳು
ನನ್ನ ಉಸಿರು
ಗೆಳತಿ ಅವಳ ಹೆಸರು

ಹೂವನು ಮೀರಿದ ಕಂಪು
ಇವಳು ಮಂಜಿಗಿಂತ ತಂಪು
ನನ್ನೆದೆಯ ಮಡುವಿನ ಕಮಲ
ಅರಳಿದಳು ಸೋಕಿಸದೆ ಕೆಸರು
ಮಡದಿ ಅವಳ ಹೆಸರು

ದೀಪದಾರತಿಯ ಬೆಳಕು
ಕಾರಿರುಳ ಕಳೆವ ಹೊಳಪು
ಹೊತ್ತು ಬರುವವಳ
ಮನ ಹಸಿರು
ಹೆಣ್ಣು ಅವಳ ಹೆಸರು

ತೊಡೆದು ಪುರುಷನ ವಿಕೃತಿ
ಕಲಿಸಿ ಬಾಳಿಗೆ ಸಂಸ್ಕೃತಿ
ಸಲಹುವವಳ
ಬದುಕು ಕೆನೆ ಮೊಸರು
ಪ್ರಕೃತಿ ಅವಳ ಹೆಸರು...

Monday, September 21, 2009

ಬಿನ್ನಹ ಮುಗಿಲಿಗೆ

ಮಳೆಯಿಲ್ಲದ ನೆಲದಲ್ಲಿ
ಕನಸಿಗೂ ಬರಗಾಲ
ಜೀವನ ಪರ್ಯಂತ..
ಬಿರುಕಿದ ಇಳೆಯಲ್ಲಿ
ಕುಸಿದು ಬಿದ್ದ ದನಿಯ
ಮೌನ ಪ್ರಾರ್ಥನೆ ..
ಅದರ ಆಸೆ ಜೀವಂತ

ಬಾರದ ಮಳೆಯಿಂದ
ತಂಪಾಗಿಲ್ಲ ಇಳೆ
ಒಡಲು ಖಾಲಿ ಖಾಲಿ
ಒಲುಮೆಯ ಮರದ
ಎಲೆಗಳು ಉದುರಿವೆ
ಮತ್ತೆ ಬಿಕ್ಕಿ ಬಿಕ್ಕಿ
ಬಿರುಗಾಳಿಗೆ ತೇಲಿ

ದೂರದೂರಿಂದ ಮುಗಿಲ
ಸವಾರಿ ಇಲ್ಲೇ ನುಗ್ಗಿದಂತೆ
ಜೀವದ ಕರೆಗೆ
ಛೆ! ನಾಲ್ಕು ಹನಿಯನ್ನೂ
ಚಿಮುಕಿಸದೆ
ಹೊರಟ ವೇಕೋ
ಮತ್ತೆ ತೆರೆಮರೆಗೆ

ಓ ಮುಗಿಲೇ ಮುನಿದೆಹೆ ಏಕೆ
ಬಾರದೆ ನಮ್ಮೀ ನೆಲಕೆ
ಕರಗಿ ಉದುರಲು
ನಿನಗೂ ತೆರಬೇಕೆ ಸುಂಕ ?
ಕರುಣಿಸಿ ಕರಗು
ತಣಿಯಲಿ ಧರೆ
ಎಂದೂ ತೋರದೆ ಬಿಂಕ..

Tuesday, August 25, 2009

ನಿನ್ನೊಡನೆ ಅಂದು


ಸಿಗಬೇಕಿದೆ ಭಾವ ತಂತು
ಮಿಡಿಯಲು ಶ್ರಾವ್ಯ ನಾದ
ಕಾಯುತಿದೆ ನಿನಗಾಗಿ ಕಾದ
ಜೀವವಿದು ಇಲ್ಲೇ ನಿಂತು


ನಿನ್ನ ನಗು ಮೊಗ ನೋಡಿ
ನಾ ಅಂದು ಕಲಿತ ಹೊಸ ರಾಗ
ನಿನ್ನ ನುಡಿಯೆಂಬ ಶ್ರುತಿಯ
ಹುಡುಕಿ ಹೊರಟಿದೆ


ನಿನ್ನ ಕಣ್ಣ ಕಾಡಿಗೆ
ನನ್ನೆದೆಯ ಗೂಡಿಗೆ
ಸೋಕಿ ಹೋದ ಆ ಕ್ಷಣವು
ಇತಿಹಾಸದ ಪುಟದಲ್ಲಿ ಅಮರವಾಗಿದೆ

ನನ್ನ ಗಲ್ಲ ಸವರಿ ಹೋದ
ನಿನ್ನ ತುರುಬಿನ ಮಲ್ಲಿಗೆ
ನಾಚಿ ಕೆಂಪಾದಾಗಲೇ
ಅದರ ಪರಿಮಳ ದುಪ್ಪಟ್ಟಾಯಿತು

ನಿನ್ನ ಸೆರಗಲ್ಲಿ ಗಂಟು ಕಟ್ಟಿದ
ನನ್ನ ಪ್ರೀತಿಯ ಒಗಟನ್ನು
ನೀನು ಬಿಚ್ಚಿ ಬಿಡಿಸಿದ ಕಲೆಯೇ
ನನಗಾದ ಜ್ಞಾನೋದಯ

ಉಸಿರುಸಿರು ಒಂದಾದಾಗಲೇ
ಅರಿತುಕೊಂಡೆ ನೀನನ್ನ ದೇವತೆ
ನೀ ಹಡೆದ ಹೊಸ ಜೀವ
ನಮ್ಮ ಬದುಕಿನ ಕಲರವ

Friday, June 19, 2009

ಮಳೆಯಲ್ಲಿ ನೆಂದು....

ಗೋಧೂಳಿ ಸಮಯ ತುಸು ಜಾರಿ
ಕಾರ್ಗತ್ತಲು ಅರಳುವ ಸಮಯ....
ಭೂ-ಬಾನು ಒಂದಾಗಿ ಮಾಡಲೆಂದೇ
ಬಂದನೇನೋ ಈ ಮಳೆರಾಯ...!
ನೆಂದು ಹೋದೆ
ಆ ಇಳೆಗಿಳಿದ ಮಳೆಗೆ

ಮಿಂದು ಹೋದೆ
ಅದು
ತಂದ ಚಳಿಗೆ
ಅಂದವಿತ್ತು
ಆ ಮಿಂಚು
ಮೋಡಗಳ ನಡುವೆ

ಮಿಂಚಿ ಮರೆಯಾಗುವ ಆ ಅಲ್ಪ ಕ್ಷಣ !
ಜೊತೆಗೆ...
ಎದೆಗೆ ಝಲ್ಲನೆ ಈಟಿ ಹೊಕ್ಕಂತೆ

ಸಿಡಿಲ ನರ್ತನ !
ಈ ನಡುವೆ ಕಾಣದ ಗೆಳತಿಯೋರ್ವಳ
ದೂರವಾಣಿ ಕರೆ!
ಅಸ್ಪಷ್ಟ ದನಿಯೊಂದಿಗೆ
ಉಭಯ ಕುಶಲೋಪರಿ!
ಈಗ ನೆಂದದ್ದು - ಮಿಂದದ್ದು.. ಬರೀ ದೇಹವಲ್ಲ
ಮನಸೂ ಸಹ... !!

Saturday, March 14, 2009

ನಿರ್ಗಮನ!

ನೀ ಕೊಟ್ಟ ಛಡಿ ಏಟಿನ ಗುರುತು
ಮನದಲ್ಲಿ ಮಾಸುವ ಮುನ್ನ
ನೀ ಇಟ್ಟ ಬರೆಗೆ ಹೃದಯ
ತಲ್ಲಣ!
ಹೆಪ್ಪುಗಟ್ಟಿದ ರಕ್ತವೂ
ಅಲ್ಲಿಂದ ಜಿನುಗಲು
ಅಶಕ್ತ !
ಒಡಲಿಗೆ ಇಟ್ಟ ಬೆಂಕಿ
ಆರಿಸಲಾಗದ
ಕಾಡ್ಗಿಚ್ಚು !
ಪಸರಿಸಿ ತನು ಮನದ ತುಂಬೆಲ್ಲಾ
ಉಳಿದದ್ದು ಬರೀ
ಬೂದಿ!
ನೆನಪಿನ ಗೊಂಚಲ
ನೀ ತಿವಿದು ಹೋದ ಸಂಜೆ
ಕಣ್ಣಂಚಿನ ಕಂಬನಿಯೂ ಆಗಿತ್ತು
ಬಿಸಿ!
ಕಲ್ಪನೆಗೂ ಮೀರಿದ್ದ
ಅಭಿಲಾಷೆಗಳ ಬಲೂನು
ಚುಚ್ಚು ಮಾತಿನ ಸೂಜಿಗೆ
ವಿಸ್ಫೋಟ!
ನಮ್ಮ ಕನಸುಗಳ ಮಾರಿಕೊಂಡ
ಆ ರಾತ್ರಿಯ ಕಹಿ ಸಮಯ
ಈಗಲೂ ಬೆಂಬಿಡದೆ ಕಾಡುವ
ದುಃಸ್ವಪ್ನ!
ತಣ್ಣಗೆ ಮಲಗಿದ್ದ ಪ್ರೀತಿಗೆ
ನೀ ಇಟ್ಟ ಕೊಳ್ಳಿ
ಆಗಿ ಹೋಯ್ತು
ಚಿತೆ!
ಅರ್ಧ ಸುಟ್ಟು ಉಳಿದ ಪಳಿಯುಳಿಕೆ
ಎಂದೆಂದೂ ಅಳಿಯದ
ಚಿಂತೆ!

Monday, February 23, 2009

ಆಡೋಣ ಬಾ...

ಓಡೋಣ ಬಾ
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ


ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ


ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ


ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !