Tuesday, August 25, 2009

ನಿನ್ನೊಡನೆ ಅಂದು


ಸಿಗಬೇಕಿದೆ ಭಾವ ತಂತು
ಮಿಡಿಯಲು ಶ್ರಾವ್ಯ ನಾದ
ಕಾಯುತಿದೆ ನಿನಗಾಗಿ ಕಾದ
ಜೀವವಿದು ಇಲ್ಲೇ ನಿಂತು


ನಿನ್ನ ನಗು ಮೊಗ ನೋಡಿ
ನಾ ಅಂದು ಕಲಿತ ಹೊಸ ರಾಗ
ನಿನ್ನ ನುಡಿಯೆಂಬ ಶ್ರುತಿಯ
ಹುಡುಕಿ ಹೊರಟಿದೆ


ನಿನ್ನ ಕಣ್ಣ ಕಾಡಿಗೆ
ನನ್ನೆದೆಯ ಗೂಡಿಗೆ
ಸೋಕಿ ಹೋದ ಆ ಕ್ಷಣವು
ಇತಿಹಾಸದ ಪುಟದಲ್ಲಿ ಅಮರವಾಗಿದೆ

ನನ್ನ ಗಲ್ಲ ಸವರಿ ಹೋದ
ನಿನ್ನ ತುರುಬಿನ ಮಲ್ಲಿಗೆ
ನಾಚಿ ಕೆಂಪಾದಾಗಲೇ
ಅದರ ಪರಿಮಳ ದುಪ್ಪಟ್ಟಾಯಿತು

ನಿನ್ನ ಸೆರಗಲ್ಲಿ ಗಂಟು ಕಟ್ಟಿದ
ನನ್ನ ಪ್ರೀತಿಯ ಒಗಟನ್ನು
ನೀನು ಬಿಚ್ಚಿ ಬಿಡಿಸಿದ ಕಲೆಯೇ
ನನಗಾದ ಜ್ಞಾನೋದಯ

ಉಸಿರುಸಿರು ಒಂದಾದಾಗಲೇ
ಅರಿತುಕೊಂಡೆ ನೀನನ್ನ ದೇವತೆ
ನೀ ಹಡೆದ ಹೊಸ ಜೀವ
ನಮ್ಮ ಬದುಕಿನ ಕಲರವ