Thursday, July 02, 2015


ರಕ್ತ ಜೇನು 
====== 
ಇದೋ ನನ್ನ ಹೃದಯದಲಿ 
ಹೆಜ್ಜೇನ ಗೂಡು. 
ಅಲ್ಲಿರುವ ಆಸೆಗಳ ಬದಿಗಿರಿಸಿ.. 
ಒತ್ತರಿಸುವ ದುಃಖವ 
ಹೆಪ್ಪು ಗಟ್ಟಿಸಿ... 
ಕೋಟಿ ಕಲ್ಪನೆಗಳ ಕರೆದು 
ಝಾಡಿಸಿ... 
ಜೇನು ಹುಳುವಾಗಿ 
ಪರಿವರ್ತಿಸಿರುವೆ.
ಮಾನಸ ಸರೋವರದ 
ತಟದಲ್ಲೇ ನನ್ನ ಕನಸುಗಳ 
ಪುಷ್ಪಲೋಕ ಬೆಳೆಸಿದ್ದೆ.. ಗೊತ್ತಲ್ಲ? 
ಅಲ್ಲಿಗೆ ಜೇನು ಹುಳುಗಳ ಅಟ್ಟಿದ್ದೆ 
ಅಲ್ಲಿನಷ್ಟೂ ಪುಷ್ಪಗಳ ಮಧುವನ್ನು ಹೀರಿ 
ಹಾರಿ ಬಂದಿವೆ ... ನನ್ನ ಮಾತು ಚಾಚೂ ತಪ್ಪದೆ...
ಪೋಣಿಸಿಯೇ ಬಿಟ್ಟಿವೆ ನೋಡು ಅದೆಂಥ 
ಅದ್ಭುತ ಜೇನ್ಗೂಡನ್ನು ನನ್ನೀ ಕಲ್ಪನೆಗಳು 
ಅರ್ಥಾತ್ ಜೇನು ಹುಳುಗಳು! 
ಕೋಟಿ ಹುಳುಗಳು ಒಮ್ಮೆಲೇ ದಾಳಿ ಮಾಡಿವೆ 
ಕೋಟಿ ಮುಳ್ಳುಗಳ ಹೃದಯಕ್ಕೆ ಒಮ್ಮೆಲೇ ಚುಚ್ಚಿವೆ
ಫಲಿತಾಂಶ: 
ನಿನಗಾಗಿಯೆ ಮೊಗೆ ಮೊಗೆದು ಕೊಡಲು 
ಬತ್ತಲಾರದಷ್ಟು ಪ್ರೀತಿ ಜೇನು 
ಜೊತೆಗೇ.. 
ವಿಹ್ವಲಗೊಂಡ ಹೃದಯದ ರಕ್ತಸ್ರಾವ 
ಪರಿಣಾಮದ ಪರಿಮಾಣ ಅರಿಯೆ
ಪ್ರೀತಿ ಜೇನನ್ನು ರಕ್ತಸ್ರಾವದ ನೋವನ್ನು
ಬಸಿದು ಸೋತಿರುವೆ.
ಬದುಕುಳಿವ ಮಾತು ಕನಸಷ್ಟೆ
ಇನ್ನುಳಿದಿರುವುದು ನಿನ್ನ ಕೆಲಸ.
ಬಾ... ನಡೆದು ಹೋಗಲಿ ಈಗಲೇ 
ನಿನ್ನ ಹೆಜ್ಜೇನ ಬೇಟೆ 
ನನ್ನೀ ಹೃದಯದ ಮೇಲೆ 
ಇರಿಯ ಬೇಕಿಲ್ಲ ಹೃದಯವನ್ನು 
ತರಬೇಕಿಲ್ಲ ಬೆಂಕಿ ಪಂಜನ್ನು 
ಸುಮ್ಮನೆ ಕೈ ಹಾಕು 
ಜಿನುಗಬಹುದು ರಕ್ತ ಜೇನು.
 ವೃತ್ತ:
 ======
ತನ್ನ ವೃತ್ತಾಂತದ ಅರ್ಥವೇ ತಿಳಿಯದೆ 
ಗುಂಡಾಗಿದೆ ಇದು. 
ತಾನಾಗೆ ಮೂಡಿದ್ದೋ ?
ಯಾರೋ ಸುತ್ತಿದ್ದೋ ?
ಎಂಬ ಉತ್ತರದ 
ಜ್ಞಾನೋದಯವಾದ ನೆನಪೇ ಅದಕಿಲ್ಲ 
ಹುಡುಕಾಟ ಹೀಗೆ ಸಾಗಿದೆ...
ತಾನು ಸಂಪೂರ್ಣನೋ ... 
ಪರಿಪುರ್ಣನೋ .... 
ಅರ್ಥಪೂರ್ಣನೋ .... 
ಯಾರೂ ತಿಳಿ ಹೇಳುವರಿಲ್ಲ.
ದುಂಡಾಗಿರುವ ಕಾರಣ ಕುರೂಪಿಯಂತೂ ಅಲ್ಲ 
ಅದಷ್ಟೇ ಕಾರಣಕ್ಕೆ ಸುಂದರನೂ ಅಲ್ಲ!
ಎರಡೂ ಬಿಂದು ಪರಸ್ಪರ ಸ್ಪರ್ಶಿಸಿರುವ ಕಾರಣ 
ಪರಿಪೂರ್ಣ ಎಂದುಕೊಂಡರೂ 
ಪರಿಧಿಯೊಳಗಿನ ಜಾಗ ಶಾಶ್ವತವಾಗಿ ಖಾಲಿಯಾಗಿದೆ 
ತುಂಬಲಾರದ ಶೂನ್ಯದಂತೆ... 
ತಾನು ಸುತ್ತುತ್ತಲೂ ಇಲ್ಲ 
ಚಲಿಸುತ್ತಲೂ ಇಲ್ಲ 
ಆ ಕಾರಣ.. 
ಅರ್ಥಪೂರ್ಣನೂ ಅಲ್ಲ.
ಸದ್ಯಕ್ಕೆ ತಾನೊಂದು ವಿಕಾರವಾಗಿರದ 
ಆಕಾರವೆಂದಷ್ಟೇ ಗೊತ್ತು 
ಅದರ ವ್ಯಾಸ ಅಳತೆಗೋಲಿಗೆ ಸಿಗದಷ್ಟಿದೆ 
ತನ್ನ ಪರಿಧಿಯು ಸುತ್ತಲೂ ಒಂದೇ ರೀತಿ 
ಕಾಣುವುದರಿಂದ 
ತಾನಾವ ದಿಕ್ಕಿನತ್ತ ದಿಟ್ಟಿಸುತ್ತಿದ್ದೇನೆ 
ಎಂಬುದೂ ತಿಳಿದಿಲ್ಲ.
ತನ್ನ ವ್ಯಾಸದಷ್ಟೇ ಅದರ ಲೋಕ 
ತನ್ನ ಪರಿಧಿಯಲ್ಲೇ ಅದು ಮೂಕ.