Tuesday, September 04, 2007

ವಿಪ್ಲವ ಭಾವ

ರುಚಿಸುತಿಲ್ಲ
ನೀಲಾಕಾಶದ ದೈತ್ಯತೆ
ಹಕ್ಕಿಗಳ ನಿನಾದ
ಎಳೆ ಬಿಸಿಲ ಚೆಲ್ಲಾ ಟ
ಹೊಂಬಿಸಿಲ ಸ್ಪರ್ಶಕೆ
ನರ್ತಿಸುವಂತಿರುವ
ಹರಿವ ನೀರ ಕಲರವ

ಸ್ತಬ್ದ ಮೌನವಿದೆ
ನೀ ಮೃದು ಹೆಜ್ಜೆಗುರುತು
ಇಟ್ಟು ಹೋದ ಮನಸಿನಲಿ
ನೆನಪಧಾರೆ ಚೆಲ್ಲಿ
ಹೋದ ಮನೆಯಲಿ
ಬೆಂಬಿಡದೇ ನಿನ್ನಗಲಿಕೆಯ
ನೋವುಂಡು ಬೇಯುತಿರುವ ಬಾಳಲ್ಲಿ

ಒಡಲಾಳದಲ್ಲಿ
ಇನ್ನೂ ಉರಿಯುತಿದೆ
ಮತ್ತೆ ನಿನ್ನ ಬರುವಿಕೆಯ ಸಾರುವ
ದಿವ್ಯ ಪ್ರಣತಿ
ಬಿರುಗಾಳಿಗೂ ನಂದದೆ
ನಕ್ಕು ಹೇಳುವಂತಿದೆ
ಆಶಾಕಿರಣ ವಿರಲು ಇರು ಎದೆಗುಂದದೆ

ಹೇಳಿ ಕಳಿಸಿರುವೆ
ನೀಲಾಕಾಶದಲ್ಲಿ ಜೂಟಾಟವಾಡುವ
ಮುಗ್ಧ ಮೇಘ ಗಳಿಗೆ
ಈಗ ತಾನೇ ಉದಯಿಸಿ
ಎಳೆ ಬಿಸಿಲ ಸೂಸುತಿರುವ ರವಿಗೆ
ಪರಿಧಿ ಇಲ್ಲದೇ ಸಾಗುವ ಹಕ್ಕಿಗಳಿಗೆ
ತಡೆ ಇಲ್ಲದೇ ಹರಿವ ನೀರಿಗೆ
ನಿನ್ನ ಹುಡುಕಲು
ಬಸಿದಿಟ್ಟ ಭಾವನೆಗಳ ತಿಳಿಸಿ
ಮತ್ತೆ ನನ್ನೆಡೆಗೆ ಬರ ಹೇಳಲು

ಆದರೂ ಯಾಕೋ ದುಗುಡವಿದೆ
ಮೇಘಗಳು ಹಾದಿ ತಪ್ಪುವ ಅಪಾಯ
ಹಕ್ಕಿಗಳು ನನ್ನ ಮಾತ ಉಪೇಕ್ಷಿಸುವ ಸಂಶಯ
ರವಿಗೆ ಪುರುಸೊತ್ತಿಲ್ಲವೇನೋ...!
ಹರಿವ ನೀರು ನಿನ್ನ ಅರಸುವಲ್ಲಿ
ಸೋಲ ಬಹುದೇನೋ...!

ಮಂಗಳ ಹಾಡಿ
ಹುಚ್ಚು ಕುದುರೆಯಂತೆ ಓಡುವ
ಈ ಕೆಟ್ಟ ಆಲೋಚನೆಗಳಿಗೆ
ನನ್ನ ಈ ಸ್ನೇಹಿತರ ಜೊತೆಗೂಡಿ
ಬದುಕನ್ನು ಹಸನು ಗೊಳಿಸು ಬಾ ಗೆಳತಿ

No comments: