Wednesday, June 20, 2007

ಪ್ರಕೃತಿಯ ಪಾಠ

ಎಲ್ಲೋ ಹುಟ್ಟಿ ಬೆಳೆದು ಅರಳಿ ನಿಂತು ನಗುವ ಹೂವು
ಮತ್ತೆಲ್ಲಿಂದಲೋ ಹಾರಿ ತೂರಿ ಬರುವ ಜೇನಿಗೆ
ತನ್ನ ಮಧುರ ಮಕರಂದ ಸೂಸುವ ಪ್ರಕ್ರಿಯೆಗೆ
ಏನೆಂದು ಹೆಸರಿಡಲಿ?


ದೂರದ ಮರದ ಟೊಂಗೆಯ ಮೇಲೆ
ಸಾವಿರಾರು ಜೇನು ಹುಳುಗಳ ಸುಂದರ ಗೂಡಿನ ನೆಲೆ
ಅಲ್ಲಿ ದಿನಗಟ್ಟಲೇ ಮಧುವ ಸಂಗ್ರಹಿಸುವುದೇ ಹುಳುಗಳ ಶೈಲಿ
ಈ ನಿರಂತರ ಕಾಯಕಕೆ ಏನೆನ್ನಲಿ..?


ಕೂಡಿ ಬಾಳುವ ಸುಖಕೆ ಉತ್ತಮ ನಿದರ್ಶನ
ಜೇನು ಹುಳುಗಳ ಈ ಅದ್ಭುತ ಪ್ರದರ್ಶನ
ನಾನು ತಾನು ಮೇಲೂ ಕೀಳು ಇವೆಲ್ಲ ಯಾವುವೂ ತಿಳಿದಿಲ್ಲ
ಗೊತ್ತಿರುವುದೊಂದೇ - ಅದು ಒಗ್ಗಟ್ಟಿನ ಕೆಲಸ!
ಈ ಸಾಂಘಿಕ ಹೋರಾಟದ ಕೆಚ್ಚು ನಮ್ಮಲ್ಲೇಕಿಲ್ಲ..?


ಪ್ರಕೃತೀಯೇ ನಮಗೆ ಬದುಕುವ ಪಾಠವನ್ನು ಈ ರೀತಿ ಕಲಿಸುತಿರುವಾಗ
ಅದನ್ನು ಅರಿಯದೇ ನಮ್ಮ ಹಳೆ ಕಟ್ಟು ಪಾಡುಗಳಿಗೇ
ಬೆಲೆ ಕೊಟ್ಟು ಬಾಳುತಿರುವ ನಾವು
ನಮ್ಮೀ ಹುಚ್ಚುತನ ಬಿಡುವುದಾದರೂ ಯಾವಾಗ..?

Tuesday, June 19, 2007

ಭಗ್ನ ಪ್ರೇಮ

ತೋಚಲಿಲ್ಲ ನನಗೆ ನೀನಂದು ತೋರಿದ
ಒಲವಿನ ಭಾವನೆಗಳ ಬಸಿದು ಬರೆದ ಪತ್ರವದು
ನಿನ್ನ ಮನದ ಬನದಲ್ಲಿ ನಾ ಬಿತ್ತು ಹೋದ
ಪ್ರೀತಿಯ ಬೀಜದ ಫಲವೆಂದು


ಅರ್ಥವಾಗಲಿಲ್ಲ ನೀನಂದು ಹೇಳಿದ ಮಾತದು
ನನ್ನ ಒಂಟಿಯಾಗಿ ಆ ನದಿ ತೀರದಿ ಬರ ಹೇಳಿ
ನಮ್ಮ ಸ್ನೇಹವನ್ನು ಪ್ರೀತಿಯಾಗಿ ಮಾರ್ಪಡಿಸುವ
ಹೊಸ ಮುನ್ನುಡಿಯ ಚೆನ್ನುಡಿಯೆಂದು


ಸೋತು ಹೋದೆ ನಿನ್ನ ಪ್ರೀತಿಯ ಪರಿಯ ಅರಿಯದಾದೆ
ನಿನ್ನ ಒಲವಿನ ಸಾಗರದ ಆಳವ ಅಳೆಯದಾದೆ
ಚಿಗುರೊಡೆಯ ಬಹುದಿದ್ದ ಪ್ರೇಮವನ್ನು
ನಾನೇ ಹೊಸಕಿ ಹಾಕಿದೆ ನಿನ್ನ ಆ ದಿನದ ಮಾತು ಕೇಳದೇ


ಭಗ್ನ ಪ್ರೇಮದ ವಿರಹ ವೇದನೆ ನಿನಗೆ ಅಲ್ಲಿ
ಜೀವನವಿಡೀ ಒಂದು ನಿಷ್ಕಲ್ಮಷ ಪ್ರೀತಿಯನ್ನು
ಸೀಳಿ ಹಾಕಿದ ತಪ್ಪು ಭಾವನೆ ನನಗಿಲ್ಲಿ


ತಾನಾಗಿ ಒಲಿದು ಬಂದ ಪ್ರೇಮವು
ಕಾಲಡಿ ಬಂದಾಗ ನಾ ಕುರುಡನಾಗಿ ಹೋದೆ
ಕಾಲ ಉರುಳಿದ ಹಾಗೆ ಅದೇ ಪ್ರೇಮ ಬೇಕೆಂದು
ನಾ ಹಂಬಲಿಸಿದಾಗ ನೀ ಕಿವುಡಿಯಾಗಿ ಹೋದೆ


ಅರಸುತಲಿರುವೆ ಹೊಸ ಪ್ರೇಮ ಭಿಕ್ಷೆ ಕೊಡುವ ದೇವಿಯನ್ನು
ಸಿಗಲಾರದ ವಸ್ತುವೇನಲ್ಲ ಅದು ಪ್ರಯತ್ನಿಸು
ಎಂದು ನೀನು ಇತ್ತೀಚೆಗೆ ಪುನಃ ಸಿಕ್ಕಾಗ ಹೇಳಿದ ಮಾತಿನ ಹುರುಪಿನಿಂದ
ತಿಳಿದಿದೆ ಮತ್ತೆ ನೀ ನನಗೆ ಸಿಗಲಾರೆಯೆಂಬ ಸತ್ಯ
ಕಾರಣ ನೀನಾಗಲೇ ಕಂಡುಕೊಂಡಿರುವೆ ನಿನ್ನ ನಿಜ ಪ್ರೇಮವನ್ನು

ಹರೆಯ ಹರಿವ ಸಮಯ

ಸದ್ದಿಲ್ಲದೇ ಸಾಗುತಿದ್ದ ಬಾಲ್ಯವು
ಹಠಾತ್ತನೆ ಜಾರಿಹೋಗಿದೆ
ಮುಗ್ಧ ಮಾತುಗಳು ಇನ್ನಿಲ್ಲದಂತಾಗಿವೆ
ಹೊಸತನ ಬಯಸಿದ ದೇಹವು
ಪ್ರಾಕೃತಿಕ ಬದಲಾವಣೆಗೆ ಮೈಯೊಡ್ದಿದೆ

ಇದು ಹದಿನೈದರ ಪ್ರಾಯ
ಪ್ರಾಯಶಃ ಹುಡುಗನ ಬಾಳಲಿ
ಯುವ ಚೈತನ್ಯ ಮೂಡುವ ಕಾಲ
ಈ ವಯೋಮಾನದ ತರುವಾಯ


ಬೆಣ್ಣೆಯಂತಿದ್ದ ಮುಖಾರವಿಂದದಲ್ಲಿತ್ತು
ಕೇವಲ ಹುಬ್ಬುಗಳೆಂಬ ಎರಡು ಸುಂದರ ಕಮಾನು
ಸುಳಿವು ನೀಡದೆ ಅರಳಿದ್ದಾರೆ ಗಡ್ಡ ಮೀಸೆ ಗಳೆಂಬ
ಹೊಸ ಸ್ನೇಹಿತರು ಸ್ವಾಗತಿಸಲೇ ಬೇಕಿದೆ ಇವರನ್ನು


ಹೆಣ್ಣು ಗಂಡೆoಬ ಭೇದವಿಲ್ಲದ ದಿನಗಳು
ಇನ್ಮುಂದೆ ಸಿಗಲಾರದೆಂಬ ದುಗುಡ ಒಂದೆಡೆ
ಆಗ ಕಂಡ ಚೋಟು ಲಂಗದ ಹುಡುಗಿ ಈಗ
ಕಣ್ಮುಂದೆ ಸುಳಿದರೆ ಹಿಂದಿರದಿದ್ದ ಚಂಚಲತೆ ಮತ್ತೊಂದೆಡೆ


ವಿಸ್ಮಯ ಭಾವಗಳು ವಿಜೃಂಭಿಸುವ ಹರೆಯವಿದು
ನಮ್ಮ ಯುವ ಜೀವ ಗಳು ತಮ್ಮದೇ
ಕನಸಿನ ಲೋಕ ವನ್ನು ಸೃಷ್ಟಿಸಿಕೊಳ್ಳವ ನೆಲೆ ಇದು
ಸುಂದರ ಸ್ವಪ್ನಗಳ ಸೆಳೆಯುವ ಮೋಹಕ ಬಲೆ ಇದು


ಹರೆಯ ಬರುವುದೇಕೋ? ಬಂದು ಕಾಡುವುದೇಕೋ?
ಬಾಲ್ಯ, ಯೌವ್ವನ, ಮುಪ್ಪುಗಳ ಕಾಂಡಗಳ ಜೊತೆ
ಮಧ್ಯೆ ಸಿಲುಕಿರುವುದೇ ಹರೆಯವೆಂಬ ಮಾದಕತೆ
ಬಾಲ್ಯ ಮರೆತು ಹೊಸ ಜೀವನ ಪ್ರಾರಂಭಿಸಬೇಕೋ..?
ಮುಂಬರುವ ಮುಪ್ಪಿನ ಚಿಂತೆ ದೂಡಲು ಈಗಲೇ ಹುರುಪಿನಿಂದ ದುಡಿಯಬೇಕೋ..?
ಈ ಪುರುಷಾರ್ಥದ ಮಹಿಮೆ ಅರಿಯಾದಂತಾಗಿದೆ ಮನಸಿಗೇಕೋ!

Friday, June 15, 2007

ಬಾಲ್ಯದ ಗೆಳತಿ

ಆಡಿ ಪಾಡಿ ಬೆಳೆದವರು ನಾವು ಚಿಕ್ಕಂದಿನಿಂದಲೂ
ಕಾರಣ ಇಬ್ಬರಿಗೂ ತಿಳಿದಿಲ್ಲ ನಾವಿಬ್ಬರು ಈಗ ದೂರವಾಗಿರಲು
ಆಗಿದ್ದವು ಆ ಬಾಲ್ಯದ ದಿನಗಳು ಆನಂದ ಮಯ
ಅಂಥ ಅಪೂರ್ವ ಕ್ಷಣಗಳು ಈಗ ಮಾಯಾ!


ಜಾಗದ ಪರಿವೆ ಇಲ್ಲದಂತೆ ಆಡಲು
ಬರುತಿದ್ದಳು ನನ್ನೊಂದಿಗೆ ಕಣ್ಣಾ ಮುಚ್ಚಾಲೆ
ನಾನೂ ಉತ್ಸುಕ ನಾಗಿ ಆಡುತಿದ್ದೆ ಅವಳೊಡನೆ ಕುಂಟು ಬಿಲ್ಲೆ
ಈಗ ಸಾಧ್ಯವಿಲ್ಲ ಆ ರೀತಿ ನಮಗೆ ಕೂಡಲು


ಜೊತೆ ಜೊತೆಗೆ ಆಡುತಿದ್ದೆವು ಜಾರು ಬಂಡಿ ಆಟ
ಮರೆಯದೇ ದಿನಾ ಆಡುತಿದ್ದೆವು ಜೂಟಾಟ
ಮುಂದೊಂದು ದಿನ ಇಬ್ಬರೂ ದೂರವಾಗುವ ಪರಿವೆ ಇಲ್ಲದೇ
ಊರೂರಿನ ಸುತ್ತಾಟವೂ ಇತ್ತು ಹಿರಿಯರಿಗೆ ಹೇಳದೇ ಕೇಳದೇ


ದೈನಂದಿನ ಕಠಿಣ ಪಾಠಗಳಿಗೆ ಇವಳದೇ ಸಹಾಯ
ಪರೀಕ್ಷೆ ಗಳಲ್ಲೂ ಉತ್ತರ ಪತ್ರಿಕೆ ತೋರಿಸುವ ಸಹೃದಯ
ಬೇಸಿಗೆ ರಜೆಗಳಲ್ಲಿ ಸಾಗೂತಿತ್ತು ಬೆಟ್ಟ ಗುಡ್ಡಗಳ ಪಯಣ
ಅಂಥಾದ್ದೊಂದು ಅನುರಾಗ ಬೆಳೆದಿತ್ತು ಇಲ್ಲದೇ ಯಾವುದೇ ಕಾರಣ

ದಿನಕಳೆದಂತೆ ಇಂಥದ್ದೊಂದು ಸ್ನೇಹ
ಕ್ರಮೇಣ ಕಡಿಮೆಯಾಯಿತು
ಕೆಲವರ ಗುಸು ಗುಸಿನಿಂದ ತಿಳಿಯಿತು ಆಕೆ ಋತುಮತಿ ಯಾಗಿದ್ದಾಳೆಂದು
ಹಿರಿಯರು ಹೇಳಿದ ಹಾಗೆ ಆಕೆ ಹಿಂದಿ ನಂತೆ ನನ್ನೊಂದಿಗೆ ಆಡುವಂತಿರಲಿಲ್ಲ ಸಹ

ಇವೆಲ್ಲ ನನ್ನ ನೆನಪಿಗೆ ಬಂದದ್ದು
ಮೊನ್ನೆ ನಾನಾಕೆಯನ್ನು ಈ ಊರಿನಲ್ಲಿ ನೋಡಿದ ದಿನದಂದು
ಹೊತ್ತು ಕೊಂಡಿದ್ದಳು ಕಂಕುಳಲ್ಲೊಂದು ಮುದ್ಡದ ಮಗು
ಮುಖಾರವಿಂದದಲ್ಲಿ ಅದೇ ಮಾಸದ ನಗು
ತಕ್ಷಣ ನನಗೆ ನೆನಪಾಗಲಿಲ್ಲ ಆಕೆಯ ಗಂಡ ಪಕ್ಕದಲ್ಲಿದ್ದದ್ದು

ಈಗಲೂ ಆಶ್ಚರ್ಯ ಪಡುವ ವಿಷಯವೆಂದರೆ
ಈಕೆ ನಮ್ಮ ಊರಿನಲ್ಲಿದ್ದ ಹಾಗೆಯೇ ಇರುವುದು
ಮುಖ ರೂಪು ಗೆಟ್ಟಿರಲಿಲ್ಲ
ಅಂದಿನ ರೂಪವೇ ಈಗಲೂ ಇದೆಯಲ್ಲ


ಬೆಂಗಳೂರೆಂಬ ಬೆಂಗಳೂರಿಗೆ ನಾ ಬಂದದ್ದು
ಹೊಸ ಕೆಲಸ ಹುಡುಕಲು
ಆದರೆ ನನ್ನ ಕಣ್ಣು ಮೊದಲು ಹವಣಿಸಿದ್ದು
ಬಾಲ್ಯದ ಗೆಳತಿಯ ನೆನಪ ಬಿಚ್ಚಲು


ನನ್ನ ಕಾಲುಗಳು ಬೆಳೆಸಿದವು ಪಯಣ
ಅವಳೊಂದಿಗೆ ಮಾತನಾಡಲು
ಸುಮಾರು ಹನ್ನೆರಡು ವರ್ಷಗಳ ನಂತರ ನಾವಿಬ್ಬರು ಬೇರೆ ಊರಿನಲ್ಲಿ ಎದುರು ಬದುರು!
ನನ್ನ ದುರಾದೃಷ್ಟ! ಆಕೆ ನನ್ನ ಗುರುತು ಹಿಡಿಯದಾದಳು
ಎದೆಯಲ್ಲಿ ಸಣ್ಣ ಝರಿ ಸರಿದಂತಾಯಿತು


ನಮ್ಮ ಹಳೆಯ ಪರಿಚಯ ಹೇಳುವ ಧೈರ್ಯ ಬರಲಿಲ್ಲ
ಆಕೆಯ ಮನದಲ್ಲಿ ನನ್ನ ಹಳೆಯ ರೂಪವೇ ಇರಬೇಕಲ್ಲ ?
ಅದೇ ಚಿರಕಾಲ ಉಳಿದು ಬಿಡಲಿ ಅಲ್ಲಿ ಎಂಬ ಮನಸಾಯಿತು
ಜಾಗ ಬಿಟ್ಟು ಹೊರಡುವಾಗ ಹೆಜ್ಜೆಗಳೆಲ್ಲ ಭಾರವಾಯಿತು

Saturday, June 09, 2007

Maddy's: ತೋಚಿದ್ದು ಗೀಚಿರುವೆ!

Maddy's: ತೋಚಿದ್ದು ಗೀಚಿರುವೆ!

ಮಳೆಗಾಲ!

ಮಳೆಗಾಲ!
ಅಬ್ಬಾ! ಈ ಕಾಲ ಆರಂಭ ವಾಯಿತೆಂದರೆ
ಮೈ ಮನಗಳ ಸುಳಿಯಲ್ಲಿ
ಹುದುಗಿರುವ ಶಾಶ್ವತ ನೆನಪುಗಳ ಜಲಧಾರೆ!



ಮಳೆ ಬರುವ ಚೆಂದವ ತೋರಿ
ಬಾಯಿಗೆ ಅನ್ನ ತುರುಕುತಿದ್ದ ಅಮ್ಮನ ತಾಳ್ಮೆ ನೆನಪಿದೆ
ಮುಂಗಾರು ಮಳೆಯಲಿ ನೆನೆದ ಹಸಿ ಕೆನ್ನೆಗೆ
ಬಿಸಿ ಮುತ್ತು ಕೊಟ್ಟ ನಲ್ಲೆಯ ಪ್ರೀತಿಯ ಜಾಣ್ಮೆ ನೆನಪಿದೆ
ತನ್ನ ಮೊಮ್ಮಗು ಎಲ್ಲಿ ನೆನೆವುದೋ ಎಂಬ ಆತಂಕದೊಂದಿಗೆ
ಅಜ್ಜಿ ಕೊಡೆ ಹಿಡಿದು ಶಾಲೆಗೆ ನುಗ್ಗಿದ ದಿನಗಳು ಎಷ್ಟಿಲ್ಲ!


ಮುಂಗಾರು ಮಳೆ ಜೊತೆ ಜೊತೆಗೇ ಪಟ ಪಟನೆ
ಬೀಳುತಿದ್ದ ಆಲಿಕಲ್ಲುಗಳ ನೆನಪಿದೆಯೇ?
ಆ ಕಲ್ಲುಗಳ ಆಯ್ದು ಕೊಂಡು ನುಂಗಿದ ನೆನಪು ಮಾಸಿಲ್ಲ ತಾನೇ?
ಅಡಿಯಿಂದ ಮು ಡಿ ವರೆಗೂ ಮಳೆಯಲ್ಲಿ ನೆನೆದ ತಪ್ಪಿಗೆ
ಶಿಕ್ಷೆಯಂತೆ ಬರುತಿದ್ದ ನೆಗಡಿಗಳಿಗೆ ಬರವಿತ್ತೇ?!



ಬಸವಳಿದ ಧರೆ ಬಿಸಿಲ ತಾಪ ತಾಳದೇ ಬಿರುಕು ಬಿಟ್ಟ ಕಾಲದಲ್ಲಿ
ಧೋ ಎಂದು ಸುರಿವ ಮಳೆಗೆ ಭೂತಾಯಿಯ ತಂಪು ಮಾಡುವ ಕೆಲಸವಾದರೆ
ಹುರುಪುಗೊಂಡ ಗಾಳಿಗೆ ಮಣ್ಣಿನ ವಾಸನೆ ಊರ ತುಂಬಾ ಪಸರಿಸುವ ಕೆಲಸ
ಆಗಾಗ ಕಾರ್ಮೋಡ ಗಳ ಮಧ್ಯೆ ಬಿಸಿಲ ಸಂಚಾರ
ಫಲವಾಗಿ ಮೂಡುತಿತ್ತು ಕಾಮನಬಿಲ್ಲಿನ ಚಿತ್ತಾರ!


ಮಳೆ ಬಿದ್ದ ಮಾರನೆಯ ಬೆಳಿಗ್ಗೆಯ ಅನುಭವವೇ ಬೇರೆ
ಮನೆಯಂಗಳದ ಗುಲಾಬಿ ಗಿಡದ ಮೇಲೆ
ರಾಶಿ ರಾಶಿ ಇಬ್ಬನಿ ಹನಿಗಳ ಮಾಲೆ
ಜೋಕಾಲಿ ಹಾಡುತ ಆಗಲೋ ಈಗಲೋ ಉದುರಿಬಿಡುವ
ಇಬ್ಬನಿ ಹನಿಗಳ ಸೊಗಸೇ ಸೊಗಸು


ಕೆಂಪು ಗುಲಾಬಿಯಮೇಲೆ ಕೆಂಪು
ಹನಿಯಂತಾಗುವ ಭಾಗ್ಯ ಇಬ್ಬನಿಯದು
ಅಲ್ಪ ಕಾಲವಾದರೂ ತನ್ನ ಸೌಂದರ್ಯವ ಹೆಚ್ಚಿಸಿದ
ಮಳೆರಾಯನಿಗೆ ಗುಲಾಬಿ ವಂದನೆ ಹೇಳಿದಂತೆ ತಲೆ ಬಾಗಿಹುದು

ಇಂಥ ಅನೇಕ ಪವಾಡ ಮಾಡುವ ಮಳೆಗಾಲದು ಎಂಥ ಮರ್ಮ?
ಅದಕ್ಕೆ ಉಳಿದೆಲ್ಲ ಕಾಲಕ್ಕಿಂತ ಈ ಕಾಲ ಚೆನ್ನ ಎನಿಸುವುದು ಅತಿಶಯೋಕ್ತಿ ಅಲ್ಲ
ಕಾಲ ಉರುಳಿ ಕಾಲ ಮರಳಿ ಬರುವುದು ಪ್ರಕೃತಿ ಧರ್ಮ
ಮಳೆ ಬಂದು ಹೋಗುವ ಈ ಪರಿಯ ಕಂಡು ಮನಸು ಹೂವಂತಾಗಿರುವುದು ಸುಳ್ಳಲ್ಲ!

Saturday, June 02, 2007

ಹುಟ್ಟುಹಬ್ಬದ ಕಾಣಿಕೆ

ಮುಡಿಪಿರಲಿ ನಮ್ಮೆಲ್ಲರ ಹುಟ್ಟುಹಬ್ಬದ ದಿನಗಳು ನಮ್ಮ ಹೆತ್ತಮ್ಮನಿಗಾಗಿ
ಹೇಳೋಣ 'ಅಮ್ಮ ನಾನಿಂದು ಏನಾಗಿದ್ದರು ಅದು ನಿನ್ನಿಂದಾಗಿ'
ನವಮಾಸಗಳ ಯಾತನೆಗಳ ಅಣು ಅಣು ವನ್ನು ಅನುಭವಿಸದವಳು
ತನ್ನೋಡಲಲ್ಲಿದ್ದ ಭ್ರೂಣ ವನ್ನು ಬಚ್ಚಿಟ್ಟು ಸಲಹಿದವಳು


ನಾವು ಹುಟ್ಟುವ ಮೊದಲೇ ನಮಗಾಗಿ ಕುಲಾವಿ ನೇಯ್ದವಳು ಇವಳು
ಹುಟ್ಟಲಿರುವ ಕಂದನ ರೂಪವನ್ನು ಮನಸಿನಲ್ಲಿಯೇ ಬಿಡಿಸಿದ್ದಳು
ತನ್ನ ಭವಿಷ್ಯದ ಆಶಕಿರಣ ತನ್ನ ಮಗುವಾಗಲಿದೆ ಎಂದು ಆಸೆ ಪಟ್ಟವಳು
ಒಡಲಲ್ಲಿ ಕಂದನ ಆಟವನ್ನು ಸಂಭ್ರಮದಿಂದ ಅನುಭವಿಸಿದವಳು


ನಮಗೆ ತಿಳಿದಿರಲಾರದು ನಾವು ಹುಟ್ಟಿದ ಮರುಕ್ಷಣವೇ
ಸ್ವರ್ಗಕ್ಕೆ ಮೂರೇ ಗೇಣು ಎಂದು ಮೊದಲು ಬೀಗಿದ್ದು ನಮ್ಮಮ್ಮ
ಮಡಿಲಿಗೆ ಬಿದ್ದೊಡನೆ ಕಣ್ಣರಳಿಸಿ ಸಿಹಿ ಮುತ್ತು ಕೊಟ್ಟವಳು ನಮ್ಮಮ್ಮ
ಶಿಶುವಿನ ಕಿವಿ ಗಡ ಚಿಕ್ಕುವ ಅಳು ಕೇಳಿದ ಕ್ಷಣವೇ
ಮೊಲೆ ಕೊಟ್ಟು ಭೂಲೋಕದ ಅಮೃತ ಕುಡಿಸಿದಳು ನಮ್ಮಮ್ಮ

ತಾನು ಎಲ್ಲ ಕಡೆ ಇರಲಾರೆ ಎಂದು ಹೇಳಿದ ದೇವನು
ಪ್ರತಿಯೊಂದು ಮನೆಯಲ್ಲೂ ಸೃಷ್ಟಿಸಿದನಂತೆ ತಾಯಿಯನ್ನು
ಪ್ರತ್ಯಕ್ಷವಾಗಿ ಕಾಣುವ ದೇವಿಗೆ ಮೀಸಲಿಡುವ ನಮ್ಮ
ಪ್ರತಿ ಹುಟ್ಟುಹಬ್ಬದ ಸವಿ ನೆನಪನ್ನು


ಘಟಿಸಿ ಹೋಗುವ ನಮ್ಮ ಜೀವನ ಪರ್ಯಂತ
ತಾಯಿ ತನ್ನದೊಂದು ಕುರುಹನ್ನು ಬಿಟ್ಟಿರುತ್ತಾಳಂತೆ
ಹೊಟ್ಟೆಯ ನಡು ಭಾಗದಲ್ಲಿ ಇಹುದು ಅವಳು ಕೊಟ್ಟ ಹೊಕ್ಕುಳ ಕುಳಿ
ಪ್ರತಿ ದಿನ ಅದೇ ನೆನಪಿಸುವುದು ಇದೇ ನಿನ್ನ ತಾಯಿಯ ಕರುಳ ಬಳ್ಳಿ