Friday, June 15, 2007

ಬಾಲ್ಯದ ಗೆಳತಿ

ಆಡಿ ಪಾಡಿ ಬೆಳೆದವರು ನಾವು ಚಿಕ್ಕಂದಿನಿಂದಲೂ
ಕಾರಣ ಇಬ್ಬರಿಗೂ ತಿಳಿದಿಲ್ಲ ನಾವಿಬ್ಬರು ಈಗ ದೂರವಾಗಿರಲು
ಆಗಿದ್ದವು ಆ ಬಾಲ್ಯದ ದಿನಗಳು ಆನಂದ ಮಯ
ಅಂಥ ಅಪೂರ್ವ ಕ್ಷಣಗಳು ಈಗ ಮಾಯಾ!


ಜಾಗದ ಪರಿವೆ ಇಲ್ಲದಂತೆ ಆಡಲು
ಬರುತಿದ್ದಳು ನನ್ನೊಂದಿಗೆ ಕಣ್ಣಾ ಮುಚ್ಚಾಲೆ
ನಾನೂ ಉತ್ಸುಕ ನಾಗಿ ಆಡುತಿದ್ದೆ ಅವಳೊಡನೆ ಕುಂಟು ಬಿಲ್ಲೆ
ಈಗ ಸಾಧ್ಯವಿಲ್ಲ ಆ ರೀತಿ ನಮಗೆ ಕೂಡಲು


ಜೊತೆ ಜೊತೆಗೆ ಆಡುತಿದ್ದೆವು ಜಾರು ಬಂಡಿ ಆಟ
ಮರೆಯದೇ ದಿನಾ ಆಡುತಿದ್ದೆವು ಜೂಟಾಟ
ಮುಂದೊಂದು ದಿನ ಇಬ್ಬರೂ ದೂರವಾಗುವ ಪರಿವೆ ಇಲ್ಲದೇ
ಊರೂರಿನ ಸುತ್ತಾಟವೂ ಇತ್ತು ಹಿರಿಯರಿಗೆ ಹೇಳದೇ ಕೇಳದೇ


ದೈನಂದಿನ ಕಠಿಣ ಪಾಠಗಳಿಗೆ ಇವಳದೇ ಸಹಾಯ
ಪರೀಕ್ಷೆ ಗಳಲ್ಲೂ ಉತ್ತರ ಪತ್ರಿಕೆ ತೋರಿಸುವ ಸಹೃದಯ
ಬೇಸಿಗೆ ರಜೆಗಳಲ್ಲಿ ಸಾಗೂತಿತ್ತು ಬೆಟ್ಟ ಗುಡ್ಡಗಳ ಪಯಣ
ಅಂಥಾದ್ದೊಂದು ಅನುರಾಗ ಬೆಳೆದಿತ್ತು ಇಲ್ಲದೇ ಯಾವುದೇ ಕಾರಣ

ದಿನಕಳೆದಂತೆ ಇಂಥದ್ದೊಂದು ಸ್ನೇಹ
ಕ್ರಮೇಣ ಕಡಿಮೆಯಾಯಿತು
ಕೆಲವರ ಗುಸು ಗುಸಿನಿಂದ ತಿಳಿಯಿತು ಆಕೆ ಋತುಮತಿ ಯಾಗಿದ್ದಾಳೆಂದು
ಹಿರಿಯರು ಹೇಳಿದ ಹಾಗೆ ಆಕೆ ಹಿಂದಿ ನಂತೆ ನನ್ನೊಂದಿಗೆ ಆಡುವಂತಿರಲಿಲ್ಲ ಸಹ

ಇವೆಲ್ಲ ನನ್ನ ನೆನಪಿಗೆ ಬಂದದ್ದು
ಮೊನ್ನೆ ನಾನಾಕೆಯನ್ನು ಈ ಊರಿನಲ್ಲಿ ನೋಡಿದ ದಿನದಂದು
ಹೊತ್ತು ಕೊಂಡಿದ್ದಳು ಕಂಕುಳಲ್ಲೊಂದು ಮುದ್ಡದ ಮಗು
ಮುಖಾರವಿಂದದಲ್ಲಿ ಅದೇ ಮಾಸದ ನಗು
ತಕ್ಷಣ ನನಗೆ ನೆನಪಾಗಲಿಲ್ಲ ಆಕೆಯ ಗಂಡ ಪಕ್ಕದಲ್ಲಿದ್ದದ್ದು

ಈಗಲೂ ಆಶ್ಚರ್ಯ ಪಡುವ ವಿಷಯವೆಂದರೆ
ಈಕೆ ನಮ್ಮ ಊರಿನಲ್ಲಿದ್ದ ಹಾಗೆಯೇ ಇರುವುದು
ಮುಖ ರೂಪು ಗೆಟ್ಟಿರಲಿಲ್ಲ
ಅಂದಿನ ರೂಪವೇ ಈಗಲೂ ಇದೆಯಲ್ಲ


ಬೆಂಗಳೂರೆಂಬ ಬೆಂಗಳೂರಿಗೆ ನಾ ಬಂದದ್ದು
ಹೊಸ ಕೆಲಸ ಹುಡುಕಲು
ಆದರೆ ನನ್ನ ಕಣ್ಣು ಮೊದಲು ಹವಣಿಸಿದ್ದು
ಬಾಲ್ಯದ ಗೆಳತಿಯ ನೆನಪ ಬಿಚ್ಚಲು


ನನ್ನ ಕಾಲುಗಳು ಬೆಳೆಸಿದವು ಪಯಣ
ಅವಳೊಂದಿಗೆ ಮಾತನಾಡಲು
ಸುಮಾರು ಹನ್ನೆರಡು ವರ್ಷಗಳ ನಂತರ ನಾವಿಬ್ಬರು ಬೇರೆ ಊರಿನಲ್ಲಿ ಎದುರು ಬದುರು!
ನನ್ನ ದುರಾದೃಷ್ಟ! ಆಕೆ ನನ್ನ ಗುರುತು ಹಿಡಿಯದಾದಳು
ಎದೆಯಲ್ಲಿ ಸಣ್ಣ ಝರಿ ಸರಿದಂತಾಯಿತು


ನಮ್ಮ ಹಳೆಯ ಪರಿಚಯ ಹೇಳುವ ಧೈರ್ಯ ಬರಲಿಲ್ಲ
ಆಕೆಯ ಮನದಲ್ಲಿ ನನ್ನ ಹಳೆಯ ರೂಪವೇ ಇರಬೇಕಲ್ಲ ?
ಅದೇ ಚಿರಕಾಲ ಉಳಿದು ಬಿಡಲಿ ಅಲ್ಲಿ ಎಂಬ ಮನಸಾಯಿತು
ಜಾಗ ಬಿಟ್ಟು ಹೊರಡುವಾಗ ಹೆಜ್ಜೆಗಳೆಲ್ಲ ಭಾರವಾಯಿತು

No comments: