Tuesday, June 19, 2007

ಹರೆಯ ಹರಿವ ಸಮಯ

ಸದ್ದಿಲ್ಲದೇ ಸಾಗುತಿದ್ದ ಬಾಲ್ಯವು
ಹಠಾತ್ತನೆ ಜಾರಿಹೋಗಿದೆ
ಮುಗ್ಧ ಮಾತುಗಳು ಇನ್ನಿಲ್ಲದಂತಾಗಿವೆ
ಹೊಸತನ ಬಯಸಿದ ದೇಹವು
ಪ್ರಾಕೃತಿಕ ಬದಲಾವಣೆಗೆ ಮೈಯೊಡ್ದಿದೆ

ಇದು ಹದಿನೈದರ ಪ್ರಾಯ
ಪ್ರಾಯಶಃ ಹುಡುಗನ ಬಾಳಲಿ
ಯುವ ಚೈತನ್ಯ ಮೂಡುವ ಕಾಲ
ಈ ವಯೋಮಾನದ ತರುವಾಯ


ಬೆಣ್ಣೆಯಂತಿದ್ದ ಮುಖಾರವಿಂದದಲ್ಲಿತ್ತು
ಕೇವಲ ಹುಬ್ಬುಗಳೆಂಬ ಎರಡು ಸುಂದರ ಕಮಾನು
ಸುಳಿವು ನೀಡದೆ ಅರಳಿದ್ದಾರೆ ಗಡ್ಡ ಮೀಸೆ ಗಳೆಂಬ
ಹೊಸ ಸ್ನೇಹಿತರು ಸ್ವಾಗತಿಸಲೇ ಬೇಕಿದೆ ಇವರನ್ನು


ಹೆಣ್ಣು ಗಂಡೆoಬ ಭೇದವಿಲ್ಲದ ದಿನಗಳು
ಇನ್ಮುಂದೆ ಸಿಗಲಾರದೆಂಬ ದುಗುಡ ಒಂದೆಡೆ
ಆಗ ಕಂಡ ಚೋಟು ಲಂಗದ ಹುಡುಗಿ ಈಗ
ಕಣ್ಮುಂದೆ ಸುಳಿದರೆ ಹಿಂದಿರದಿದ್ದ ಚಂಚಲತೆ ಮತ್ತೊಂದೆಡೆ


ವಿಸ್ಮಯ ಭಾವಗಳು ವಿಜೃಂಭಿಸುವ ಹರೆಯವಿದು
ನಮ್ಮ ಯುವ ಜೀವ ಗಳು ತಮ್ಮದೇ
ಕನಸಿನ ಲೋಕ ವನ್ನು ಸೃಷ್ಟಿಸಿಕೊಳ್ಳವ ನೆಲೆ ಇದು
ಸುಂದರ ಸ್ವಪ್ನಗಳ ಸೆಳೆಯುವ ಮೋಹಕ ಬಲೆ ಇದು


ಹರೆಯ ಬರುವುದೇಕೋ? ಬಂದು ಕಾಡುವುದೇಕೋ?
ಬಾಲ್ಯ, ಯೌವ್ವನ, ಮುಪ್ಪುಗಳ ಕಾಂಡಗಳ ಜೊತೆ
ಮಧ್ಯೆ ಸಿಲುಕಿರುವುದೇ ಹರೆಯವೆಂಬ ಮಾದಕತೆ
ಬಾಲ್ಯ ಮರೆತು ಹೊಸ ಜೀವನ ಪ್ರಾರಂಭಿಸಬೇಕೋ..?
ಮುಂಬರುವ ಮುಪ್ಪಿನ ಚಿಂತೆ ದೂಡಲು ಈಗಲೇ ಹುರುಪಿನಿಂದ ದುಡಿಯಬೇಕೋ..?
ಈ ಪುರುಷಾರ್ಥದ ಮಹಿಮೆ ಅರಿಯಾದಂತಾಗಿದೆ ಮನಸಿಗೇಕೋ!

No comments: