Thursday, May 17, 2007

ಪೇಚಾಟ

ವಿಚಿತ್ರ ಬಯಕೆಗಳ
ವಿಕ್ಷಿಪ್ತ ಸಾಗರದಲ್ಲಿ
ಮಿಂದೆದ್ದಂತಿದೆ ಮನಸು
ಸಹಸ್ರ ಕನವರಿಕೆಗಳಿಗೆ
ಸಾಕ್ಷಿಯಾಗಿ ಮೂಡಿದಂತಿದೆ
ಕಾಡುವ ಈ ಕನಸು


ಮನಸು ನೆನೆದಂತೆ
ತಪ್ಪದೇ ಕಾಣುವೆ
ಪ್ರತಿ ರಾತ್ರಿಯ ಕನಸು
ಕಾಣುವ ಕನಸೆಲ್ಲವೂ
ನಿಜವಾದರೆ ಅದೆಂಥ ಸೊಗಸು!


ಪ್ರತಿದಿನದ ಕಾಯಕವೇ ಬೇರೆ
ಮನಸು ಯಾಚಿಸುವುದೇ ಬೇರೆ
ತೃಪ್ತಿಯುಂಟೆ ಈ ಬದುಕಿಗೆ?
ಇಹ ಪರದ ಆಲೋಚನೆ ಬಿಟ್ಟು
ನಮ್ಮಷ್ಟಕ್ಕೆ ನಾವಿದ್ದರೆ ಸಾಕೆ?


ಎಲ್ಲೋ ಕೇಳಿದ ನೆನಪು
ಆಸೆಯೆ ದುಖಕೆ ಮೂಲ
ಎಲ್ಲೋ ಓದಿದ ನೆನಪು
ಆಸೆಯೆ ಇಲ್ಲದಿರೆ ಅದು ಜೀವನವೇ ಅಲ್ಲ!


ಒಡಲಾಳದ ಬೇಗುದಿ ಆರಲು
ಚಿಮ್ಮ ಬೇಕಿದೆ ನೆಮ್ಮದಿಯ ಕಾರಂಜಿ
ಮನದ ದುಗುಡ ದೂಡಲು
ಅರಳಬೇಕಿದೆ ಅಭಯದ ಅಪರಂಜಿ


ಎಷ್ಟೆಲ್ಲಾ ಪೇಚಾಟಗಳ ಮಧ್ಯೆ
ಒಳಮನಸು ಹೇಳುವ ಬುದ್ಧಿಯೇ ಬೇರೆ
'ಇಂದು ಉದುರಿಹೋದ ಹಣ್ಣೆಲೆ ಜಾಗದಿ
ಚಿಗುರಲಾರದೇ ಮತ್ತೆ ನಳನಳಿಸುವ ಚಿಗುರೆಲೆ?
ಕಾಯುತಿರು ನಿನ್ನ ದಿನ ಬರುವ ವೇಳೆ..'

1 comment:

Anonymous said...

ಎಲ್ಲೋ ಕೇಳಿದ ನೆನಪು
ಆಸೆಯೆ ದುಖಕೆ ಮೂಲ
ಎಲ್ಲೋ ಓದಿದ ನೆನಪು
ಆಸೆಯೆ ಇಲ್ಲದಿರೆ ಅದು ಜೀವನವೇ ಅಲ್ಲ!

namma nenapugalu,asegalu,ella estu chennagiruthe nenpisikondaga
adrondige namma jeevanavu saguthe pechatadondige...

illi nimma kavithe adannu chennagi bimbiside..