Monday, May 21, 2007

ಒಂದು ಜಿಜ್ಞಾಸೆ

ಲೇಖನಿಯಲಿ ಕವಿತೆಯಾಗಿ ಮೂಡಲು
ಹಿಂದೇಟಾಕುವ ನೀನು
ನಾ ಕುಂಚ ಹಿಡಿಯಲು ಚಿತ್ರವಾಗಿ ಉದ್ಭವಿಸಲು ಕಾರಣವೇನು?


ನಾನು ಒಬ್ಬ ಕೆಟ್ಟ ಕವಿಯೆಂಬ
ಸತ್ಯ ನಿನಗೂ ತಿಳಿದು ಹೋಯಿತೆ?
ಅಥವಾ ನಾನೊಬ್ಬ ಒಳ್ಳೆಯ
ಚಿತ್ರಕಾರನೆಂಬ ಭ್ರಮೆಯೇ?


ಬಿಳಿ ಹಾಳೆಯಲಿ ನಿನ್ನಂದವ
ವಿಶೇಷ ಪದಗಲ್ಲಿ ಹಿಡಿದಿಡುವ ಆಸೆ ಪಟ್ಟೆ
ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ
ನೋಡೋಣ ಚಿತ್ರವಾಗಿಯಾದರೂ ಮೂಡುವೆಯೇನೋ
ಎಂದು ಲೇಖನಿ ಪಕ್ಕಕ್ಕಿಟ್ಟೆ


ಹಿಂದೆಂದೋ ಅಭ್ಯಾಸವಿದ್ದ ಈಗ ಕೈಬಿಟ್ಟಿರುವ
ಕುಂಚವನ್ನು ಅದೇ ಬಿಳಿ ಹಾಳೆಯಲಿ
ಬಣ್ಣ ಬಣ್ಣದ ಮಿಶ್ರಣದಿ ಬಿಡಿಸಿದೆ ನಿನ್ನ ರೂಪವ
ಏನಾಶ್ಚರ್ಯ! ನಾನೆಣಿಸಿದಕ್ಕಿಂತ
ಅದ್ಭುತವಾಗಿ ಮೂಡಿ ಬಂದಿರುವೆ ನೀನು
ನಾನಂದು ಕಂಡಿದ್ದ ಅದೇ ರೂಪದಲ್ಲಿ


ಒಂದು ಮಾತಿದೆ - ನೂರು ಪದಗಳ
ಅಷ್ಟೂ ಅರ್ಥಗಳನ್ನು ಒಂದು ಚಿತ್ರವು
ಥಟ್ಟನೆ ಹೇಳಿಬಿಡುವುದಂತೆ
ಪದಗಳಿಗೆ ನಿಲುಕದ ಭಾವಗಳು
ಚಿತ್ರಗಳಲ್ಲೇ ನಿಲುಕುವುದಂತೆ!


ಹೇಗೋ ಏನೋ ನಾನಾಸೆ ಪಟ್ಟಂತೆ
ಕವಿತೆಯಾಗಲಿಲ್ಲ ನೀನು
ನಿನ್ನಾಸೆಯಂತೆ ನನ್ನ ಕುಂಚದಲ್ಲೇ ಉಳಿದುಬಿಟ್ಟೆ
ಆದರೆ ನನ್ನ ಜಿಜ್ಞಾಸೆ ಇನ್ನೂ ಮುಗಿದಿಲ್ಲ
ಲೇಖನಿ ಹಿಡಿಯಲೋ ಕುಂಚ ಹಿಡಿಯಲೋ ಎಂಬ ಚಿಂತೆಯಲಿ ಮುಳುಗಿಹೆನಲ್ಲ!

No comments: