Thursday, May 31, 2007

ಪಾರ್ಕಿನ ಮೆಲುಕು

ಒಂದು ದಿನ ಹೀಗೇ ನನ್ನ ಕಾಲಹರಣ ಆ ಪಾರ್ಕಿನಲ್ಲಿ ನಡೆದಿತ್ತು
ಎಷ್ಟೋ ವಿಚಿತ್ರ ಮುಖಗಳ ದರ್ಶನವಾಗುವುದು ಅಲ್ಲಿ ಸಾಮಾನ್ಯವೂ ಆಗಿತ್ತು
ಪ್ರತಿ ಯೊಂದು ಮುಖಗಳಲ್ಲೂ ಒಂದಲ್ಲಾ ಒಂದು ನೋವು ಬೇಗುದಿಗಳ ಸರಮಾಲೆ
ಒಬ್ಬನ ಮುಖದಲ್ಲಿ ದುಖದ ಕಟ್ಟೆ ಒಡೆದಂತಹ ಕಣ್ಣೀರು
ಮತ್ತೊಬ್ಬನ ಕಂಗಳಲ್ಲಿ ಭವಿಷ್ಯದ ಆಸೆಯೆ ಇಲ್ಲ ದಂತಹ ನಿರ್ಲಿಪ್ತತೆ


ಆಗೋ ಅಲ್ಲಿ ಹುಡುಗಿಯೊಬ್ಬಳ ಮುಗಿಯದ ಸುತ್ತಾಟ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ...
ಯಾರಿಗೋ ಕಾಯುತಿರಬೇಕೆಂದುಕೊಂಡೆ
ನನ್ನ ಗ್ರಹಿಕೆ ಸುಳ್ಳಾಗಲಿಲ್ಲ
ಅಲ್ಲೊಬ್ಬ ಬಂದೆ ಬಿಟ್ಟ ಅವಳ ಬಳಿ ಕೈಯಲ್ಲೊಂದು ಕೆಂಪು ಗುಲಾಬಿಯ ಹಿಡಿದು!
ಅಂದು ಪ್ರೇಮಿಗಳಿಬ್ಬರ ಮೊದಲ ಅಧಿಕೃತ ದಿನ ಆರಂಭ ವಾಗಿತ್ತು


ನನ್ನ ಪಕ್ಕದ ಕುರ್ಚಿಯಲ್ಲಿದ್ದವ ಇವರಿಬ್ಬರನ್ನು ಗಮನಿಸುತಿದ್ದನೇನೋ!
ಒಬ್ಬನೇ ಗೊಣಗಿಕೊಂಡ "ಹ್ಹಿ ಹ್ಹಿ ಹ್ಹಿ ಇಬ್ಬರಿಗೂ ಮಾಡಲು ಕೆಲ್ಸಾ ಇಲ್ಲ"
"ಇವತ್ತು ಹೀಗೇ ನಾಳೆ ಮತ್ಯಾಗೋ"
ಪ್ರಾಯಶಃ ಭಗ್ನ ಪ್ರೇಮಿ ಇರಬೇಕೆಂದು ಸುಮ್ಮನಾದೆ


ನನ್ನ ಹಾಗೆ ಕೆಲಸವಿಲ್ಲದೇ ಕಾಲಹರಣ ಮಾಡುವ ಸೋಮಾರಿಗಳು
ಇಂತಹ ಅಮರ (?) ಪ್ರೇಮಿಗಳ ಸಮ್ಮಿಲನ
ಎಷ್ಟೋ ಮುಗ್ಧ ಜನರ ನೋವಿನ ಆಕ್ರಂದನ
ಮಕ್ಕಳನ್ನು ಆಡಿಸಲು ಬರುವ ತಾಯಂದಿರು
ಇಳಿ ವಯಸ್ಸಿನಲ್ಲೂ ವ್ಯಾಯಾಮದ ನೆಪ ಹೇಳಿ
ಹೆಂಗಸರನ್ನು ನೋಡಲು ಬರುವ ಚಪಲ ಚನ್ನಿಗರಾಯರ ವರಸೆ
ಇಲ್ಲಿ ಇಂದಿನ ಪ್ರತಿದಿನದ ವಿಶೇಷಗಳು!


ಇವಿಷ್ಟೆಲ್ಲದರ ಮಧ್ಯೆಯೂ ನನ್ನ ಬಾಲ್ಯದಲ್ಲಿ ನಾನಂದು
ಕಂಡಿದ್ದ ವೈಶಿಷ್ಟ್ಯಗಳೆ ಬೇರೆಯಾಗಿತ್ತು
ಅವು ಸಿವಿ ನೆನಪಿನ ಬುತ್ತಿಗಳು
ಬೆಳ್ಳಂ ಬೆಳಿಗ್ಗೆ ಇಲ್ಲಿ ನೆರೆಯುತಿದ್ದರು ನಮ್ಮ ನಾಡಿನ ಖ್ಯಾತ ಸಾಹಿತಿಗಳು
ಒಬ್ಬೊಬ್ಬರದೂ ವಿಶಿಷ್ಟ ವ್ಯಕ್ತಿತ್ವದ ಮಾಸದ ಗುರುತುಗಳು
ಪ್ರತಿ ದಿನವೂ ಸಾಹಿತ್ಯದ ಬಗ್ಗೆ ಚರ್ಚೆ ದೇಶದ ಬಗ್ಗೆ ಮಾತುಕತೆ
ಇವರೆಲ್ಲರ ಮಾತುಗಳನ್ನು ನಾನು ಕದ್ದು ಕೇಳುತಿದ್ದೆ ಮರೆಯಲ್ಲಿ
ಇಂಥ ಸುಂದರ ನೆನಪುಗಳ ನಾನು ಹೇಗೆ ಮರೆಯಲಿ



ಸಿಗುವುದೇ ನನಗೆ ಅಂಥ ಮತ್ತೊಂದು ಕಾಲ?
ಈ ಪಾರ್ಕಿನಲ್ಲಿ ಈಗಲೂ ಇದೆ ಸ್ನಿಗ್ಧ ಸೌಂದರ್ಯ
ಅಂದಿದ್ದ ಬೃಹತ್ ಮರಗಳ ಕೊರಗನ್ನು ಅಂದಿನ ಚಿಕ್ಕ ಮರಗಳು ಈಗ ನೀಗಿಸಿವೆ
ಎಂಥವರನ್ನು ನಿಬ್ಬೆರಗಾಗಿಸುವಂತೆ ಬೃಹದಾಕಾರವಾಗಿ ಬೆಳೆದಿದೆ
ಈಗಲೂ ಇದ್ದಾರೆ ಸಾಹಿತಿಗಳು ಆದರೆ ಅವರಿಗೆಲ್ಲ ಇಲ್ಲ ಅಂದಿದ್ದ ಸಾಹಿತಿಗಳ ಖದರು
ಎಲ್ಲಾ ಇದ್ದು ಏನೋ ಕಳೆದುಕೊಂಡಂತಹ ಸ್ಥಿತಿ ನಮ್ಮಂಥವರದು!


ಅಂದಿನ ಒಂದು ಜನಾಂಗವೇ ಮರೆಯಾಗಿದೆ
ಇಂದಿನ ಜನಾಂಗದಲ್ಲಿ ನಾನು ಇನ್ನೂ ಇದ್ದೇನೆ
ಕೆಲಸವಿಲ್ಲದೇ ಹರಟುವ ಹರುಕು ಬಾಯಿ ದಾಸನಾಗಿ
ಹಿಂದಿನ ದಿನಗಳ ಮೆಲುಕು ಹಾಕಲು ಕೊಡುವೆ ಪ್ರತಿದಿನ ಭೇಟಿ ಇಲ್ಲಿ


ಮತ್ತೆಷ್ಟು ದಿನ ನನ್ನ ಈ ಅವತಾರ?

ಒಂದು ದಿನ ನಾ ಕೂಡ ಒಂದು ನೆನಪಾಗಬಹುದು
ಇವೆಲ್ಲಕ್ಕೂ ಮೂಕ ಸಾಕ್ಷಿಯಾಗಿ ಹರಡಿದೆ ಈ ಪಾರ್ಕು ಸುತ್ತಾ ಮುತ್ತಾ

ಮತ್ತೆ ಸಾಗಿವೆ, ಸಾಗಲಿವೆ
ಇಂದು ಮತ್ತದೇ ಸತ್ವವಿಲ್ಲದ ಸಂಗತಿಗಳು ಅತ್ತ ಇತ್ತ!

No comments: